ಮುರುಘಾ ಮಠದಲ್ಲಿ ಸ್ಥಳ ಮಹಜರು, ನಾಪತ್ತೆಯಾದ ಆರೋಪಿಗಳಿಗಾಗಿ ಶೋಧ

Social Share

ಚಿತ್ರದುರ್ಗ,ಸೆ.4- ಪೋಕ್ಸೊ ಕಾಯ್ದೆಯಡಿ ಬಂಧಿತರಾಗಿರುವ ಶ್ರೀ ಮುರುಘಾ ಶರಣರನ್ನು ಇಂದು ಶ್ರೀಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಜೊತೆಯಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೂ ಕಾರ್ಯಾಚರಣೆ ನಡೆಸಲಾಗಿದೆ.ಶ್ರೀಮಠದಿಂದ ನಡೆಯುತ್ತಿರುವ ಹಾಸ್ಟೆಲ್‍ನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಶ್ರೀಗಳನ್ನು ಬಂಧಿಸಲಾಗಿದೆ.

ನ್ಯಾಯಾಲಯ ಶ್ರೀಗಳನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸ್ವಾಮೀಜಿಯವರನ್ನು ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ.
ಇಂದು ಚಿತ್ರದುರ್ಗ ಗ್ರಾಮಾಂತರ ಡಿವೈಎಸ್ಪಿ ಅನಿಲ್‍ಕುಮಾರ್ ಅವರ ನೇತೃತ್ವದ ತನಿಖಾ ತಂಡ ಶ್ರೀಗಳನ್ನು ಮುರುಘಾ ಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದೆ.

ಬಾಲಕಿಯರು ನ್ಯಾಯಾೀಧಿಶರ ಮುಂದೆ ನೀಡಿರುವ ಹೇಳಿಕೆ ಪ್ರಕಾರ, ಶ್ರೀಮಠದ ಶ್ರೀಗಳ ಅಂತಃಗೃಹದಲ್ಲಿ ಕೃತ್ಯ ನಡೆದಿರುವುದಾಗಿ ಹೇಳಲಾಗಿದೆ. ಹೀಗಾಗಿ ಪೊಲೀಸರು ಇಂದು ಸ್ಥಳ ಮಹಜರಿನ ವೇಳೆ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ದಾಖಲಿಸಿದ್ದಾರೆ.

ಯಾವ ಜಾಗದಲ್ಲಿ ಕೃತ್ಯ ನಡೆದಿತ್ತು. ವಿದ್ಯಾರ್ಥಿನಿಯರು ಬಂದುಹೋಗುತ್ತಿದ್ದ ಮಾರ್ಗ ಯಾವುದು? ಎಲ್ಲೆಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಸಿಸಿಟಿವಿ ಇಲ್ಲದ ಜಾಗಗಳು ಯಾವು ಎಂಬೆಲ್ಲ ವಿಚಾರಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಸ್ಥಳ ಮಹಜರಿನ ವೇಳೆ ಕೆಲವು ಪ್ರಮುಖ ಸಾಕ್ಷಿಗಳನ್ನು ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ನಾಳೆ ಶ್ರೀಗಳ ಪೊಲೀಸ್ ಕಸ್ಟಡಿಯ ಅವ ಪೂರ್ಣಗೊಳ್ಳಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕಾರ ನೀಡಿದ ಇತರ ಆರೋಪಿಗಳಾದ ಬಸವಾದಿತ್ಯ, ಪರಮಶಿವಯ್ಯ ಮತ್ತು ಗಂಗಾಧರ್ ಅವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ.

Articles You Might Like

Share This Article