ಚಿತ್ರದುರ್ಗ,ಆ.29- ಅಹಿತಕರ ಮತ್ತು ಅನಾರೋಗ್ಯಕರ ಪರಿಸ್ಥಿತಿಯನ್ನು ಧೈರ್ಯವಾಗಿ ಎದರಿಸುತ್ತೇವೆ. ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಪಲಾಯನ ಮಾಡುವುದಿಲ್ಲ. ಸಮಸ್ಯೆಯಿಂದ ಹೊರ ಬರುತ್ತೇವೆ ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಶ್ರೀಗಳು ಕಳೆದ 2-3 ದಿನಗಳ ಬಳಿಕ ಶ್ರೀಮಠದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ತಮ್ಮ ಭಕ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ಶ್ರೀಗಳು ತಲೆ ಮರೆಸಿಕೊಂಡಿದ್ದಾರೆ. ಮಹಾರಾಷ್ಟ್ರದತ್ತ ಪಲಾಯನವಾಗುತ್ತಿದ್ದಾರೆ ಎಂಬೆಲ್ಲಾ ವದಂತಿಗಳು ಹರಡಿದ್ದವು. ಆದರೆ, ಹಾವೇರಿಯಿಂದ ಚಿತ್ರದುರ್ಗಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆಗಮಿಸಿದ ಶ್ರೀಗಳು ಸಾರ್ವಜನಿಕರನ್ನು ಉದ್ದೇಶಿಸಿ ನಗುಮುಖದಲ್ಲೇ ಮಾತನಾಡಿದರು.
ನಿಮ್ಮೆಲರ ಸಲುವಾಗಿ ನಾನು ಧೈರ್ಯವಾಗಿದ್ದೇನೆ. ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಎದುರಾಗಿರುವ ಸಂದರ್ಭವನ್ನು ಧೈರ್ಯವಾಗಿ ಸಹನೆ ಮತ್ತು ಬುದ್ದಿವಂತಿಕೆಯಿಂದ ಹೆದರಿಸೋಣ. ಸರ್ವಜನರ ಸಹಕಾರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.
ತಮ್ಮ ವಿರುದ್ಧ 15 ವರ್ಷಗಳಿಂದಲೂ ಪಿತೂರಿ ನಡೆಯುತ್ತಲೇ ಇದೆ. ಈ ಮೊದಲು ಮಠದ ಒಳಗೆ ನಡೆಯುತ್ತಿತ್ತು. ಈಗ ಹೊರಗೆ ನಡೆಯುತ್ತಿದೆ. ಇದಕ್ಕೆಲ್ಲಾ ತಾರ್ಕಿಕ ಕೊನೆಗಾಣಿಸುವ ಅಗತ್ಯವಿದೆ. ಪ್ರತಿಯೊಬ್ಬರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ಕೊಡಬೇಕೆಂದು ಮನವಿ ಮಾಡಿದರು.
ತಾವು ಈ ನೆಲದ ಕಾನೂನನ್ನು ಗೌರವಿಸುವ ಮಠಾಪತಿಯಾಗಿ, ಪೀಠಾಧ್ಯಕ್ಷರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇದರಲ್ಲಿ ಪಲಾಯನವಾದ ಇಲ್ಲ. ಗಟ್ಟಿಯಾದ ಸ್ಥಿರತೆ ಮೇಲೆ ನಿಂತು ಮಾತನಾಡುತ್ತೇನೆ. ಸಾರ್ವಜನಿಕರು, ಅಭಿಮಾನಿಗಳು ಅನಗತ್ಯವಾಗಿ ಹರಡುವ ವದಂತಿಗಳು, ಊಹಾಪೋಹಗಳನ್ನು ನಂಬಬಾರದು ಎಂದು ಹೇಳಿದರು.
ಮುರುಘಾಮಠ ಒಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿತ್ತು. ನಾವು ನ್ಯಾಯಬದ್ಧವಾಗಿದ್ದೇವೆ. ಎಲ್ಲಾ ಸಮುದಾಯಗಳಿಗೂ ಒಳ್ಳೆಯದನ್ನು ಬಯಸುತ್ತೇವೆ, ಏನೋ ಒಂದು ಅಹಿತಕರ, ಅನಾರೋಗ್ಯಕರ ಸಂದರ್ಭ ಸೃಷ್ಟಿಯಾಗಿದೆ.
ಅದರಿಂದ ಹೊರಗೆ ಬಂದೇ ಬರುತ್ತೇವೆ ಎಂಬ ವಿಶ್ವಾಸವಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಲಕ್ಷಾಂತರ ಜನ ಶ್ರೀಮಠಕ್ಕೆ ಬರುತ್ತಿದ್ದಾರೆ. ಅವರ ಅಭಿಮಾನ, ನೋವು ನನಗೆ ಅರ್ಥವಾಗುತ್ತಿದೆ. ಇದನ್ನೆಲ್ಲಾ ನೋಡಿದ ಮೇಲೆ ನನಗೆ ಧೈರ್ಯ ಹೆಚ್ಚಾಗಿದೆ. ಹೆದರುವ ಅಗತ್ಯವಿಲ್ಲ ಎನ್ನಿಸಿದೆ. ಶ್ರೀಮಠದ ಮೇಲಿನ ಅಭಿಮಾನ ಚಿಮ್ಮಿಸಲು ಕಾರಣಕರ್ತರಾದವರಿಗೆ ಒಂದು ಸೆಲ್ಯೂಟ್ ಎಂದು ಶ್ರೀಗಳು ತಿಳಿಸಿದರು.
ಬಳಿಕ ಶ್ರೀಮಠದಲ್ಲಿ ಶರಣ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಯಿತು. ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು.