ಬೆಂಗಳೂರು,ಆ.23- ವಾಹನ ಸವಾರರೇ ಎಚ್ಚರ..! ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಶಿವಾನಂದ ವೃತ್ತದ ಬಳಿ ನಿರ್ಮಿಸಲಾಗಿರುವ ಉಕ್ಕಿನ ಸೇತುವೆ ಮೇಲೆ ಹೋಗುವಾಗ ಕೇಳಿಸುತ್ತಿದೆ ಎದೆ ಜಲ್ಲ್ ಎನ್ನುವ ಶಬ್ದ. ಚೊಚ್ಚಲ ಸ್ಟೀಲ್‍ಬ್ರಿಡ್ಜ್‍ಗೆ ಮಹಾ ಕಂಟಕ ಎದುರಾಗಿದ್ದು, ಬಿಬಿಎಂಪಿಯ ಮತ್ತೊಂದು ಮಹಾ ಎಡವಟ್ಟು ಬಯಲಾಗಿದೆ. ಇದಕ್ಕೆ ಆರಂಭದಲ್ಲೇ ಕಳಪೆ ಕಾಮಗಾರಿ ಆರೋಪಗಳು ಕೇಳಿಬರುತ್ತಿದ್ದು, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ವಾಹನಗಳ ಓಡಾಟಕ್ಕೆ ಯೋಗ್ಯವೇ? ಎಂಬ ಹಲವಾರು ಪ್ರಶ್ನೆಗಳು ಸವಾರರಲ್ಲಿ ಮೂಡಿದೆ.
ಆ.15ರಂದು ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಪಾಲಿಕೆ ಅವಕಾಶ ಕಲ್ಪಿಸಿತ್ತು. ಆದರೆ ಸೇತುವೆ ಮೇಲೆ ವಾಹನಗಳು ಸಂಚರಿಸಿದರೆ ಭಾರೀ ಶಬ್ದ ಕೇಳಿಬರುತ್ತಿದೆ. ಇದರಿಂದ ಸವಾರರು ಆತಂಕಕ್ಕೆ ಈಡಾಗಿದ್ದಾರೆ. ಲಘು ವಾಹನಗಳು ಸಂಚರಿಸಿದರೆ ಇಷ್ಟು ಶಬ್ದ ಬರುತ್ತದೆ. ಇನ್ನು ಭಾರೀ ಪ್ರಮಾಣದ ವಾಹನಗಳು ಸಂಚರಿಸಿದರೆ ಬ್ರಿಡ್ಜ್ ಅಲುಗಾಡುವುದರ ಜೊತೆಗೆ ದೊಡ್ಡ ಮಟ್ಟದ ಶಬ್ದಗಳು ಕೇಳಿಬರುತ್ತವೆ.
ಇನ್ನು ಒಂದೇ ಸಮ ವಾಹನ ಸಂಚರಿಸಿದರೆ ಇಡೀ ಬ್ರಿಡ್ಜ್ ವೈಬ್ರೇಟ್ ಆಗುತ್ತದೆ. ಇದರಿಂದಲೇ ತಿಳಿಯುತ್ತಿದೆ ಬಿಬಿಎಂಪಿ ಎಷ್ಟು ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸಾಲು ಸಾಲು ದೂರುಗಳು ಬಂದಿವೆ. ಕೇವಲ ವೈಬ್ರೇಷನ್ ಅಲ್ಲ ರಸ್ತೆ ತುಂಬ ಉಬ್ಬುತಗ್ಗುಗಳಿವೆ. ಅಲ್ಲದೆ ಪ್ರತಿ 20 ಮೀಟರ್‍ಗೆ ಬ್ರಿಡ್ಜ್‍ನಲ್ಲಿ ಜಾಯಿಂಟ್ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಜೋಡಣೆ ಮಾಡುವ ವೇಳೆ ರಸ್ತೆ ಉಬ್ಬಾಗಿದೆ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ವಾಹನಗಳ ಸಂಚಾರ, ಮಾಡಿದರೆ ಕ್ರಮೇಣವಾಗಿ ಉಬ್ಬು ಸರಿಹೋಗಲಿದೆ ಎಂದು ಪಾಲಿಕೆ ಸ್ಪಷ್ಟೀಕರಣ ನೀಡಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್ ಮಾಹಿತಿ ನೀಡಿ, ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಸ್ತೆ ಉಬ್ಬು, ವೈಬ್ರೇಷನ್ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ರಸ್ತೆ ಉಬ್ಬು ನಿರ್ಮಾಣವಾಗಿಲ್ಲ. ಕ್ರಮೇಣ ಈ ಉಬ್ಬು ತಗ್ಗಿ ಸಮವಾಗಲಿದೆ. ಘನ ವಾಹನಗಳು ಓಡಾಡುವಾಗ ವೈಬ್ರೇಷನ್ ಆಗುತ್ತಿದೆ. ಅದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬ್ರಿಡ್ಜ್‍ನ ಲೋಪದೋಷಗಳನ್ನು ಪತ್ತೆಹಚ್ಚಲೆಂದೇ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದರು.
ಇನ್ನೊಂದು ವಾರದಲ್ಲಿ ಎರಡೂ ಬದಿಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಪರ-ವಿರೋಧಗಳ ನಡುವೆಯೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಸ್ಟೀಲ್ ಬ್ರಿಡ್ಜ್‍ಗೆ ವಿದ್ಯುಕ್ತ ಚಾಲನೆ ನೀಡುವ ಸಾಧ್ಯತೆಯಿದ್ದು, ಅಷ್ಟರೊಳಗೆ ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.