ಮಳವಳ್ಳಿ,ಜು.13- ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಕಪಿಲಾ-ಕಾವೇರಿ ಸಂಗಮದಲ್ಲಿ ನದಿಗಳು ಮೈದುಂಬಿ ಹರಿಯುತ್ತಾ ಶಿವನ ಸಮುದ್ರದ ಪ್ರವಾಸಿತಾಣ ಗಗನಚುಕ್ಕಿ ಜಲಪಾತ ದುಮ್ಮಿಕ್ಕುತ್ತಾ ಪ್ರವಾಸಿಗರ ಕಣ್ಮನ ತಣಿಸಲು ಕೈ ಬೀಸಿ ಕರೆಯುತ್ತಿದೆ.
ಕೆಲವು ದಿನಗಳಿಂದ ಕೇರಳ ಮತ್ತು ಕೊಡಗಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕಾವೇರಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಎರಡೂ ಜಲಾಶಯಗಳಿಂದಲೂ ಒಂದು ಲಕ್ಷ ಕ್ಯೂಸೆಕ್ ವರೆಗೂ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ.
ಈ ಪ್ರಕೃತಿಯ ನಯನ ರಮಣೀಯ ಸೊಬಗನ್ನು ಕಣ್ಣುಂಬಿಕೊಳ್ಳಲು ನಗರ ಪ್ರದೇಶಗಳಿಂದ ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಅದರಲ್ಲೂ ವೀಕೆಂಡ್ ರಜಾ ದಿನಗಳನ್ನು ಕಳೆಯಲು ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಬರುವುದು ವಾಡಿಕೆ. ಆದರೆ, ಪ್ರಸ್ತುತ ಕಳೆದ ನಾಲ್ಕು ದಿನದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಿಟಿ ಜಿಟಿ ಮಳೆ ಜಿನುಗುಡುತ್ತಿರುವುದರಿಂದ ಪ್ರವಾಸಿಗರ ಬರುವಿಕೆ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಬೆಳಕವಾಡಿ ಠಾಣೆ ಪಿಎಸ್‍ಐ ಅಶೋಕ್ ಈ ಸಂಜೆ ಪತ್ರಿಕೆಗೆ ತಿಳಿಸಿದ್ದಾರೆ.