ಕರುನಾಡ ಚಕ್ರವರ್ತಿ, ಹಾಟ್ರಿಕ್ ಹೀರೋ, ಲವಲವಿಕೆಯ ಚಿಲುಮೆ, ಎವರ್ ಗ್ರೀನ್ ಹೀರೋ, ಡಾ. ಶಿವರಾಜ್‍ಕುಮಾರ್ ಅವರಿಗೆ 60ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ಕನ್ನಡ ಚಿತ್ರರಂಗದ ಯಜಮಾನ ಅಂದರೆ ತಪ್ಪಾಗಲಾರದು. ಹೊಸಬರು ಹಳಬರು ಎನ್ನದೆ ಎಲ್ಲ ಕಲಾವಿದರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರನ್ನು ಪ್ರೋತ್ಸಾಹ ನೀಡುತ್ತ ಹುರಿದುಂಬಿಸುವ ಪರಿ ಶ್ಲಾಘನೀಯ.
ಜೀವಕ್ಕೆ ಜೀವವಾಗಿದ್ದ ಪ್ರೀತಿಯ ತಮ್ಮ ಅಪ್ಪು ಇಲ್ಲದೆ ಶಿವಣ್ಣ ಆಚರಣೆ ಮಾಡಿಕೊಳ್ಳುತ್ತಿರುವ ಮೊದಲ ಹುಟ್ಟು ಹಬ್ಬ ಇದು. ಪ್ರತಿಯೊಂದು ಕಾರ್ಯಕ್ರಮದಲ್ಲಿ ತಮ್ಮನನ್ನ ನೆನೆದು ಭಾವುಕರಾಗುವ ಶಿವರಾಜ್ ಕುಮಾರ್ ಜನುಮ ದಿನದ ಸಂಭ್ರಮದ ಮೂಡಿನಲ್ಲಿ ಇಲ್ಲ. ನಾನು ಹುಟ್ಟು ಹಬ್ಬದ ಆಚರಣೆಯನ್ನು ಮಾಡಿಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದರು.
ದೊಡ್ಡಮನೆಯ ಕಡೆಯಿಂದ ಆ ರೀತಿಯ ಆಚರಣೆಗೆ ಈ ವರ್ಷ ಬ್ರೇಕ್ ಬಿದ್ದಿದೆ. ಅಪ್ಪು ಇದ್ದಿದ್ದರೆ ಅಣ್ಣನ ಸಾರ್ಥಕ 60 ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಈ ವಿಷಯವನ್ನು ಅಪ್ಪು ಕೆಲವರ ಬಳಿ ಹೇಳಿಕೊಂಡಿದ್ದರಂತೆ.
ಅಣ್ಣನೆಂದರೆ ಬಹಳ ಇಷ್ಟಪಡುತ್ತಿದ್ದ ಅಪ್ಪು, ತಂದೆ ಡಾ. ರಾಜಕುಮಾರ್ ಹೋದ ಮೇಲೆ ಶಿವಣ್ಣನಿಗೆ ಆ ಸ್ಥಾನ ಕೊಟ್ಟು ಪ್ರೀತಿ ಅಭಿಮಾನ ತೋರುತ್ತಿದ್ದರು. ತಮ್ಮನಿಲ್ಲದೆ ಹುಟ್ಟು ಹಬ್ಬ ಆಚರಿಸಿ ಕೊಳ್ಳಲು ಶಿವಣ್ಣನಿಗೆ ಇಷ್ಟವಿಲ್ಲದಿದ್ದರೂ ಅಭಿಮಾನಿಗಳು ಮಾತ್ರ ತನ್ನ ನೆಚ್ಚಿನ ನಟನ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ರಕ್ತದಾನ, ಅನ್ನದಾಸೋಹ, ಬಡ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ನೋಟ್ ಪುಸ್ತಕ ವಿತರಣೆ, ಅನಾಥಾಶ್ರಮಗಳಿಗೆ ನೆರವು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಶಿವಣ್ಣನ ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ಅವರ ನಿವಾಸದ ಮುಂದಿನ ರಸ್ತೆಗೆ ಶಿವಣ್ಣನ ಹೆಸರಿಟ್ಟು ಗೌರವ ತೋರಲಾಗಿದೆ.
ಬಾಕ್ಸ್ ಆಫೀಸ್ ದಾಖಲೆ ವೀರ
1986ರಲ್ಲಿ ಆನಂದ್ ಸಿನಿಮಾ ಮೂಲಕ ನಾಯಕನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಶಿವರಾಜಕುಮಾರ್, ಮೂರುವರೆ ದಶಕಗಳ ಕಾಲ ವಿವಿಧ ಪಾತ್ರಗಳು ಮೂಲಕ ಪ್ರೇಕ್ಷಕರನ್ನ ರಂಜಿಸಿ, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್‍ನಲ್ಲಿ ಇತಿಹಾಸವನ್ನು ಕ್ರಿಯೇಟ್ ಮಾಡಿರೋ ದಾಖಲೆಯ ವೀರ. ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ರಿಟೈರ್‍ಮೆಂಟ್ ಆಗದ ಚಿರ ಯುವಕ.
ಅಭಿನಯಿಸಿರುವ ಅಷ್ಟು ಚಿತ್ರಗಳಲ್ಲಿ ಸೋಲು ಹಾಗೂ ಗೆಲುವನ್ನು ಸಮ ಪ್ರಮಾಣದಲ್ಲಿ ಕಂಡಿದ್ದರೂ ಕೂಡ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ಆಕರ್ಷಣೆ ಮಾಡುತ್ತಾ ಬಂದಿದ್ದಾರೆ. ಈಗಲೂ ಹೊಸ ಮತ್ತು ಹಳೆಯ ನಿರ್ದೇಶಕರು, ನಿರ್ಮಾಪಕರು ಕಾಲ್‍ಶೀಟ್‍ಗಾಗಿ ಮನೆಮುಂದೆ ಕ್ಯೂ ನಿಲ್ಲುವಷ್ಟು ಬಿಜಿಯಾಗಿದ್ದಾರೆ ಮತ್ತು ಅಭಿಮಾನಿ ಗಳಲ್ಲಿ ಅದೇ ಉತ್ಸುಕತೆಯನ್ನ ಮೂಡಿಸಿದ್ದಾರೆ.
ನೃತ್ಯ ಪ್ರಿಯ ಶಿವಣ್ಣ
ಶಿವಣ್ಣನಿಗೆ ನೃತ್ಯ ಎಂದರೆ ಬಲು ಅಚ್ಚುಮೆಚ್ಚು. ಸಿನಿಮಾವಾಗಲಿ, ಸಮಾರಂಭವಾಗಲಿ, ಮತ್ತ್ಯಾವುದೇ ಸಮಾರಂಭವಾಗಲಿ ಯಾವುದೇ ಹಾಡು ಪ್ಲೇ ಆದರೆ ಶಿವಣ್ಣನ ಕಾಲುಗಳು ತಮಗೆ ಅರಿವಿಲ್ಲದಂತೆಯೇ ಕುಣಿಯಲು ಆರಂಭಿಸುತ್ತವೆ, ಅವರ ನೃತ್ಯ ಕಂಡರೆ ಅವರಿನ್ನೂ ಚಿರ ಯುವಕನೆಂಬ ಭಾವ ಎಲ್ಲರಲ್ಲೂ ಮೂಡುತ್ತದೆ.
ಶಿವಣ್ಣ ಡೈಲಾಗ್ಸ್, ಫೈಟ್ಸ್‍ಗಳನ್ನು ಎಷ್ಟು ಲೀಲಾಜಾಲವಾಗಿ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುತ್ತಾರೋ, ಅದೇ ರೀತಿ ತಾವು ಹಾಕುವ ಸ್ಟೆಪ್ಸ್‍ಗಳಿಂದಲೂ ಅಭಿಮಾನಿಗಳ ದಿಲ್ ಗೆದ್ದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಬಿಡುಗಡೆಯಾಗಿರುವ ಬೈರಾಗಿ ಚಿತ್ರದಲ್ಲಿ ಹಾಕಿರುವ ಹುಲಿ ಹೆಜ್ಜೆಯ ಸ್ಟೆಪ್ಸ್. ಈ ನೃತ್ಯವನ್ನು ಕಂಡರೆ ಶಿವಣ್ಣನಿಗೆ 60 ವರ್ಷವಾಯಿತು ಎಂದು ಹೇಳಲೇ ಆಗುವುದಿಲ್ಲ.
ನಿರ್ಮಾಪಕರಾದ ಸೆಂಚುರಿ ಸ್ಟಾರ್
ಕನ್ನಡ ಸಿನಿಮಾರಂಗದ ಮೇರು ನಿರ್ಮಾಪಕಿಯಾಗಿದ್ದ ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮ ವಜ್ರೇಶ್ವರಿ ಕಂಬೈನ್ಸ್ ಮೂಲಕ ಹಲವಾರು ಸದಭಿರುಚಿ ಸಿನಿಮಾಗಳನ್ನು ನಿರ್ಮಿಸಿದ್ದರು.
ಪುನೀತ್‍ರಾಜ್‍ಕುಮಾರ್ ಕೂಡ ಪಿಆರ್‍ಕೆ ಪೆÇ್ರಡಕ್ಷನ್ಸ್ ಮೂಲಕ ಕವಲು ದಾರಿ, ಮಾಯಬಜಾರ್, ಫ್ರೆಂಚ್ ಬಿರಿಯಾನಿ ಎಂಬ ಸಿನಿಮಾಗಳನ್ನು ನಿರ್ಮಿಸಿದ್ದರು, ಶಿವಣ್ಣ ಕೂಡ ತಮ್ಮ ನಿರ್ಮಾಣದಲ್ಲಿ ಹಲವು ವೆಬ್‍ಸೀರೀಸ್‍ಗಳನ್ನು ನಿರ್ಮಿಸಿದ್ದು, ಈಗ ತಮ್ಮ ಗೀತಾ ಪಿಚ್ಚರ್ಸ್ ಮೂಲಕ ತಮ್ಮ ನಟನೆಯ ವೇದ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಗಮನ ಸೆಳೆದಿರುವ ಶಿವಣ್ಣ, ತಮ್ಮ ಕನಸಾದ ನಿರ್ದೇಶನದ ವಲಯದಲ್ಲೂ ಗುರುತಿಸಿಕೊಳ್ಳಲಿ ಎಂದು ಅಭಿಮಾನಿಗಳು ಜನ್ಮ ದಿನದ ಶುಭ ಸಂದರ್ಭದಲ್ಲಿ ಹಾರೈಸಿದ್ದಾರೆ.
ಘೋಸ್ಟ್ ಪೋಸ್ಟರ್ ಬಿಡುಗಡೆ
ಚಿತ್ರರಂಗದಲ್ಲಿ ಸದಾ ಬ್ಯುಸಿಯಾಗಿರುವ ನಟರಾಗಿರುವ ಶಿವರಾಜ್‍ಕುಮಾರ್ ಒಟ್ಟಿಗೆ ನಾಲ್ಕೈದು ಚಿತ್ರಗಳಲ್ಲಿ ನಟಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.
ಶಿವಣ್ಣನ ಜನ್ಮದಿನ ಬಂದರೆ ಹಲವು ಸಿನಿಮಾಗಳು ಸೆಟ್ಟೇರುವುದು ಕೂಡ ಮೊದಲಿನಿಂದಲೂ ನಡೆದುಕೊಂಡು ಬಂದಿದೆ, ಈ ವರ್ಷವೂ ಸೆಂಚುರಿಸ್ಟಾರ್ ಶಿವಣ್ಣನ ಹಲವು ಚಿತ್ರಗಳ ಪೋಸ್ಟರ್‍ಗಳು ಬಿಡುಗಡೆಯಾಗಿವೆ. ಬೀರಬಲ್, ಶ್ರೀನಿವಾಸಕಲ್ಯಾಣ ಸಿನಿಮಾಗಳ ನಾಯಕ ಶ್ರೀನಿ ಅವರು ಆ್ಯಕ್ಷನ್ ಕಟ್ ಹೇಳಿರುವ ಘೋಸ್ಟ್ ಸಿನಿಮಾದ ವಿಭಿನ್ನ ಪೋಸ್ಟರ್‍ರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು.
ಕಿಂಗ್ ಆಫ್ ಆಲ್ ಮಾಸಸ್ ಎಂಬ ಕ್ಯಾಚಿ ಟೈಟಲ್ ಹೊಂದಿರುವ ಈ ಚಿತ್ರದ ಚಿತ್ರೀಕರಣವು ಆಗ¸್ಟï ಅಂತ್ಯದ ವೇಳೆಗೆ ಆರಂಭವಾಗಲಿದೆ ಇದರ ಜೊತೆಗೆ ಅವನೇ ಶ್ರೀಮನ್ನಾರಾಯಣ ಸಿನಿಮಾದ ನಿರ್ದೇಶಕ ಸಚಿನ್ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ಅಶ್ವತ್ಥಾಮ, ಯೋಗರಾಭಟ್ ನಿರ್ದೇಶನದಲ್ಲಿ ಪ್ರಭುದೇವರೊಂದಿಗೆ ನಟಿಸುತ್ತಿರುವ ಸಿನಿಮಾ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಲೈವ 169 ಹಾಗೂ ಅರ್ಜುನ್ ಜನ್ಯ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ 45 ಚಿತ್ರಗಳು
ಸೇರಿ 8 ಹೊಸ ಪ್ರಾಜೆP್ಟïಗಳು ಶಿವಣ್ಣನ ಕೈಯಲ್ಲಿವೆ. ಚಂದನವನ ಮತ್ತು ಭಾರತದ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರು ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.