ನೊಯಿಡಾ,ಆ.8- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಸರ್ಕಾರದ ಬುಲ್ಡೋಜರ್ ಸ್ವಪಕ್ಷೀಯರ ವಿರುದ್ಧವೂ ಘರ್ಜಿಸಿದೆ. ಈ ಹಿಂದೆ ಕೋಮುಗಲಭೆಯಲ್ಲಿ ಆರೋಪಿ ಗಳಾಗಿದ್ದವರು ಮತ್ತು ಕುಮ್ಮಕ್ಕು ನೀಡಿದವರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ನಡೆದಿತ್ತು. ಇದು ದೇಶಾದ್ಯಂತ ಸುದ್ದಿಯಾಗಿ ವಾದ-ವಿವಾದಗಳಿಗೂ ಕಾರಣವಾಗಿದ್ದಲ್ಲದೆ, ಉತ್ತರ ಪ್ರದೇಶದ ಮಾದರಿ ಎಂಬ ಪ್ರತ್ಯೇಕ ಗುರುತಿಸುವಿಕೆಯನ್ನೂ ಸಂಪಾದಿಸಿತ್ತು.
ಈಗಲೂ ಯಾವುದೇ ರೀತಿಯ ವಾದಗಳು ಕೇಳಿ ಬಂದಾಗ ಅಲ್ಲಿ ಬುಲ್ಡೋಜರ್ ದಾಳಿ ಆಗಬೇಕು ಎಂಬ ಚರ್ಚೆಗಳು ನಡೆಯುತ್ತವೆ. ಆದರೆ, ಪ್ರತಿಪಕ್ಷಗಳು ಯೋಗಿ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಬುಲ್ಡೋಜರ್ ಬಳಸುತ್ತದೆ ಎಂದು ಆರೋಪಿಸುತ್ತಿದ್ದವು. ಈಗ ತಮ್ಮದೇ ಪಕ್ಷದ ಶ್ರೀಕಾಂತ್ ಟಿ ತ್ಯಾಗಿ ಅವರ ವಿರುದ್ಧ ಕೂಡ ಯೋಗಿ ಸರ್ಕಾರ ಬುಲ್ಡೋಜರ್ ಪ್ರಯೋಗಿಸಿದೆ.
ನೊಯಿಡಾದ ಗ್ರ್ಯಾಂಡ್ ಒಮೆಕ್ಸೆ ಸೊಸೈಟಿ ಸಿಟಿ ಸೆಂಟರ್ 93 ಡಿನಲ್ಲಿ ಶ್ರೀಕಾಂತ್ ಅವರು ತಮ್ಮ ಅಪಾರ್ಟ್‍ಮೆಂಟ್‍ನ ಮುಂದೆ ಸೊಸೈಟಿಯ ಜಾಗವನ್ನು ಒತ್ತುವರಿ ಮಾಡಿ ಕೊಂಡಿತ್ತು. ಅಲ್ಲಿನ ಪಾರ್ಕ್‍ನಲ್ಲಿ ಗಿಡಗಳನ್ನು ನೆಟ್ಟಿದ್ದರು. ಇದನ್ನು ಪ್ರಶ್ನಿಸಿದ ಮಹಿಳೆಯೊಬ್ಬರ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಮದಿಸಿ ದಮ್ಕಿ ಹಾಕಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂದು ಬೆಳಗ್ಗೆ ಉತ್ತರ ಪ್ರದೇಶದ ಅಧಿಕಾರಿಗಳು ಬುಲ್ಡೋಜರ್ ಬಳಸಿ ಶ್ರೀಕಾಂತ್ ಅವರು ಒತ್ತುವರಿ ಮಾಡಿದ್ದ ಅಕ್ರಮ ನಿರ್ಮಾಣವನ್ನು ತೆರವು ಮಾಡಿದ್ದಾರೆ.
ಶ್ರೀಕಾಂತ್ ನೊಯಿಡಾ ಭಾಗದ ಬಿಜೆಪಿ ನಾಯಕರಲ್ಲ ಎಂದು ಪಕ್ಷ ಸ್ಪಷ್ಟನೆ ನೀಡಿದೆ. ಉತ್ತರ ಪ್ರದೇಶದ ಬೇರೊಂದು ಕ್ಷೇತ್ರದಲ್ಲಿ ಶ್ರೀಕಾಂತ್ ಕೃಷಿ ಮೋರ್ಚಾದ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಗ್ರ್ಯಾಂಡ್ ಒಮೆಕ್ಸೆ ಸೊಸೈಟಿಯಲ್ಲಿ ವಾಸವಿದ್ದಾರೆ ಎಂದು ತಿಳಿಸಲಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಅಕ್ರಮ ನಿರ್ಮಾಣದ ವಿರುದ್ಧ ನಾವು ಪ್ರಶ್ನೆ ಮಾಡುತ್ತಲೇ ಇದ್ದೇವೆ. ಆದರೆ, ಶ್ರೀಕಾಂತ್ ಅದಕ್ಕೆ ಸ್ಪಂದಿಸಲಿಲ್ಲ. ಕೊನೆಗೂ ಈಗ ಅವಕಾಶ ಸಿಕ್ಕಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀಕಾಂತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಾಗಿದೆ.