ತುಮಕೂರು, ಫೆ.17- ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ಜರುಗುವ ಪ್ರಸಿದ್ಧ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ನಾಳೆಯಿಂದ ಮಾರ್ಚ್ 4ರ ವರೆಗೆ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸ್ತು ಪ್ರದರ್ಶನ ಟ್ರಸ್ಟ್ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಬಿ.ಗಂಗಾಧರಯ್ಯ, ವಸ್ತು ಪ್ರದರ್ಶನವನ್ನು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದು, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯವಹಿಸಲಿದ್ದಾರೆ.
ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಲಿದ್ದು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವಸ್ತು ಪ್ರದರ್ಶನ ಟ್ರಸ್ಟ್ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಮಾತನಾಡಿ, ವಸ್ತು ಪ್ರದರ್ಶನಕ್ಕೆ ರೈತಾಪಿ ಜನ, ಭಕ್ತಾದಿಗಳು, ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಪರೀಕ್ಷೆ ಹಾಗೂ ಲಸಿಕಾಕರಣಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು.
ಜನರಿಗೆ ಕುಡಿಯುವ ನೀರು, ನೈರ್ಮಲ್ಯತೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಾಲಿಕೆಗೆ ಹಾಗೂ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠದ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಮಾತನಾಡಿ, ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆಯಲಿದ್ದು, 18 ಸರ್ಕಾರಿ ಹಾಗೂ 150 ಖಾಸಗಿ ಸೇರಿದಂತೆ ಒಟ್ಟು 168 ಮಳಿಗೆಗಳನ್ನು ತೆರೆಯಲಾಗುವುದು.
ವಸ್ತು ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪಾರಿತೋಷಕ ಹಾಗೂ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರಲ್ಲದೆ, ವಸ್ತುಪ್ರದರ್ಶನ ಸಂದರ್ಭದಲ್ಲಿ ಪ್ರತಿನಿತ್ಯ ಸಂಜೆ ಬಯಲು ರಂಗಮಅದಿರದಲ್ಲಿ ಸುಗಮ ಸಂಗೀತ, ವಚನಗಾಯನ, ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ವಸ್ತುಪ್ರದರ್ಶನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವನ ದರ್ಶನ ಪರಿಚಯ ಮಾಡಿಕೊಡಬೇಕು ಹಾಗೂ ಮಠಕ್ಕೆ ಹೋಗಲು ನೆನೆಗುದಿಗೆ ಬಿದ್ದಿರುವ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮಾಧ್ಯಮ ಪ್ರತಿನಿಗಳು ಸಲಹೆ ನೀಡಿದರು.
ಶ್ರೀ ಮಠದಲ್ಲಿ ಫೆ.23 ರಿಂದ ಮಾರ್ಚ್ 4ರವರೆಗೆ ಜರುಗಲಿರುವ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಉತ್ಸವ ಹಾಗೂ ದನಗಳಜಾತ್ರೆ ನಡೆಯಲಿದೆ. ದನಗಳ ಜಾತ್ರೆಗೆ ಆಗಮಿಸುವ ಜಾನುವಾರುಗಳಿಗೆ ಮಠದ ವತಿಯಿಂದ ನೀರು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು. ಜಾತ್ರೆಗೆ ಆಗಮಿಸುವವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ ಉಪಸ್ಥಿತರಿದ್ದರು.
