ನಾಡೋಜ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ, 5 ಲಕ್ಷ ಮೊತ್ತದ ಪುರಸ್ಕಾರ

Social Share

ಬೆಂಗಳೂರು,ಜ.29- ದಲಿತ ಬಂಡಾಯದೊಳಗಿನ ಆಶಯಗಳಿಗೆ ತಮ್ಮದೇ ಆದ ದಾಟಿಯಲ್ಲಿ ಸಾಮಾಜಿಕ ವಿಸ್ತಾರವಾದ ಸ್ವರೂಪವನ್ನು ತಂದಂತಹ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಶಸ್ತಿಯು ಐದು ಲಕ್ಷ ರೂ. ನಗದು, ಫಲಕ, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪುರಸ್ಕøತರವನ್ನು ಆಯ್ಕೆ ಮಾಡಲು ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಆಯ್ಕೆ ಉಪಸಮಿತಿ ಹಾಗೂ ಮಾರ್ಗಸೂಚಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹೊರಡಿಸಿದೆ. ಸಾಮಾಜಿಕ ನ್ಯಾಯದ ಆಶಯಗಳಿಗೆ ಸ್ಪಂದಿಸುವ ಹಿರಿಯ ಲೇಖಕರು ಆಯ್ಕೆ ಸಮಿತಿ ಅಧ್ಯಕ್ಷರಾಗಿರಬೇಕು.
ಒಬ್ಬರು ಪ್ರಾಧ್ಯಾಪಕರು, ಒಬ್ಬ ಹಿರಿಯ ಕವಿ ಅಥವಾ ಲೇಖಕರು ಸದಸ್ಯರಾಗಿರಬೇಕು. ಹಾಗೆಯೇ ಶೋಷಿತ ಸಮುದಾಯಗಳ ನಡುವೆ ಸಾಮಾಜಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರೊಬ್ಬರು ಸದಸ್ಯರಾಗಿರಬೇಕಿದ್ದು, ಈ ನಾಲ್ವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು ಎಂಬ ಶರತ್ತು ವಿಧಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಶೋಷಿತ ತಳ ಸಮುದಾಯಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಆಶಯಗಳಿಗೆ ವಿಸ್ತಾರವಾದ ನೆಲೆ ತಂದುಕೊಡಲು ಶ್ರಮಿಸಿದ ಸೃಜನಶೀಲ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು.
ತಳ ವರ್ಗದಿಂದ ಬಂದ ಸೃಜನಶೀಲ ಸಾಧಕ ಲೇಖಕರನ್ನು ಹುಡುಕಬೇಕು. ವಿಶಿಷ್ಟ ಸಂದರ್ಭಗಳಲ್ಲಿ ಸೂಚಿತ ಆಶಯಗಳಿಗೆ ಪೂರಕವಾಗಿ ಸಾಧನೆಗೈದ ಅನ್ಯ ಲೇಖಕರನ್ನು ಪರಿಗಣಿಸಬಹುದು. ಒಂದು ವರ್ಷ ಕನ್ನಡ ಲೇಖಕರಿಗೂ ಮತ್ತೊಂದು ವರ್ಷ ಅನ್ಯ ರಾಜ್ಯಗಳ ಕನ್ನಡೇತರ ಭಾಷೆಗಳ ಲೇಖಕರಿಗೆ ಕೊಡಬೇಕು ಪ್ರಶಸ್ತಿ ಆಯ್ಕೆಗೆ ಪರಿಗಣಿಸುವ ಸಾಧಕರು ಕನಿಷ್ಠ 10ರಿಂದ 15 ವರ್ಷಗಳ ಸೇವೆ ಸಲ್ಲಿಸಿರಬೇಕು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡ ಮಾಡುವ ಇತರೆ ವಾರ್ಷಿಕ ಪ್ರಶಸ್ತಿಗಳ ಸಾಮಾನ್ಯ ನಿಯಮಾವಳಿಗಳು ಈ ಪ್ರಶಸ್ತಿಗೂ ಅನ್ವಯವಾಗಲಿದೆ. ಆದರೆ, ಪಠ್ಯ ಪುಸ್ತಕ, ಸಂಶೋಧನಾ ಪ್ರಬಂಧ, ಪುಸ್ತಕ ಲೇಖಕರನ್ನು ಹಾಗೂ ಸಹ ಲೇಖಕರನ್ನು ಈ ಪ್ರಶಸ್ತಿಗೆ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Articles You Might Like

Share This Article