ತುಮಕೂರು, ಫೆ. 23- ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಗಂಗಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಅಂಗವಾಗಿ ಹಿರಿಯ ಶ್ರೀಗಳ ಮಾದರಿಯಲ್ಲೆ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ನಗರದಾದ್ಯಂತ ಸಂಚರಿಸಿ ಭಿಕ್ಷಾಟನೆ ನಡೆಸಿದರು.
ಶ್ರೀಮಠದ ಪರಂಪರೆಯನ್ನು ಮುನ್ನಡೆಸುತ್ತಿರುವ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ಹಿರಿಯ ಶ್ರೀಗಳಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ವಿವಿಧ ಅಂಗಡಿಗಳು, ವರ್ತಕರನ್ನು ಭೇಟಿ ಮಾಡಿ ಭಿಕ್ಷಾಟನೆ ನಡೆಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ರೆಡ್‍ಕ್ರಾಸ್ ಬಿಲ್ಡಿಂಗ್, ಮಂಡಿಪೇಟೆಯ ವಿವಿಧ ಅಂಗಡಿಗಳು ಸೇರಿದಂತೆ ನಗರದಾದ್ಯಂತ ಶ್ರೀಗಳು ಸಂಚರಿಸಿ ಭಕ್ತರಿಂದ ಕಾಣಿಕೆ, ದವಸ-ಧಾನ್ಯಗಳನ್ನು ಸ್ವೀಕರಿಸಿದರು.
ಭಿಕ್ಷಾಟನೆಗೆ ಬಂದ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡ ವರ್ತಕರು, ಜನಸಾಮಾನ್ಯರು ಕಾಣಿಕೆ, ದವಸ-ಧಾನ್ಯಗಳನ್ನು ನೀಡಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಶ್ರೀಗಳು, ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಹಾಗಾಗಿ ಶ್ರೀಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತಿದೆ. ಸೋಂಕು ಕಡಿಮೆಯಾಗಿದ್ದರೂ ಸಹ ಜಾತ್ರೆಗೆ ಮತ್ತು ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.
ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಪರಮಪೂಜ್ಯರು ನಡೆಸಿಕೊಂಡು ಬಂದಿರುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ನಗರದ ಮಂಡಿಪೇಟೆ, ಅಶೋಕ ರಸ್ತೆ ಸೇರಿದಂತೆ ವಿವಿಧೆಡೆ ಭಿಕ್ಷಾಟನೆ ನಡೆಸಲಾಗಿದೆ ಎಂದರು.
ಟಿ.ಕೆ. ನಂಜುಂಡಪ್ಪ, ಕೋರಿ ಮಂಜಣ್ಣ, ನೇರಳಾಪುರ ಕುಮಾರ್, ಪಂಚಾಕ್ಷರಯ್ಯ, ಎಂ.ಬಿ. ಕುಮಾರ್, ಎಲ್‍ಐಸಿ ಪಂಡಿತ್, ಮಲ್ಲೇಶ್ ಸೇರಿದಂತೆ ಶ್ರೀಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು.
