‘ನಿನ್ ಗೋಳನ್ನ ಎಸ್‍ಐಟಿ ಮುಂದೆ ಹೇಳಪ್ಪಾ’ : ರೋಷನ್‌ ಬೇಗ್‌ಗೆ ಸಿದ್ದು ಟಾಂಗ್

ಮೈಸೂರು, ಜೂ.13- ತಮ್ಮ ವಿರುದ್ಧ ವ್ಯಂಗ್ಯ ಹೇಳಿಕೆ ನೀಡಿದ್ದ ಶಾಸಕ ರೋಷನ್ ಬೇಗ್ ಅವರಿಗೆ ಐಎಂಎ ಹಗರಣದಲ್ಲಿ ನಿಮ್ಮ ಪಾತ್ರದ ಬಗೆಗಿನ ಗೋಳನ್ನು ಎಸ್‍ಐಟಿ ಮುಂದೆ ಹೇಳಪ್ಪಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯಭರಿತ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ರೋಷನ್ ಬೇಗ್ ಅವರ ಹೆಸರು ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೇಳಿಬಂದಿರುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಹಗರಣದ ಬಗ್ಗೆ ಎಸ್‍ಐಟಿ ತನಿಖೆ ನಡೆಸಲಿದೆ. ಹಾಗಾಗಿ ನಾನು ಸಾರ್ವಜನಿಕವಾಗಿ ಅದರ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದರು.

ಐಎಂಎನಲ್ಲಿ ರೋಷನ್‍ಬೇಗ್ ಹಣ ಹೂಡಿದ್ದಾರೋ ಇಲ್ಲವೋ ಅದೆಲ್ಲ ನನಗೆ ತಿಳಿಯದು. ಐಎಂಎ ಸಂಸ್ಥೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‍ಗೂ ಬೇಗ್ ಅವರಿಗೂ ಸ್ನೇಹವಿದೆಯಾ ಎಂಬುದು ಗೊತ್ತಿಲ್ಲ. ಅವರ ಗೋಳು ಏನೇ ಇದ್ದರೂ ಎಸ್‍ಐಟಿ ಮುಂದೆ ಹೇಳಲಿ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ವಿಸ್ತರಣೆ ಮಾಡಿಕೊಳ್ತಾರೆ… ಎಂದಷ್ಟೇ ಹಾರಿಕೆ ಉತ್ತರ ನೀಡಿದರು.  ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಬಗ್ಗೆ ನಾವು ಏನನ್ನೂ ಹೇಳಲಾಗುವುದಿಲ್ಲ. ನಾವು ಸತ್ಯ ಹೇಳಲಾರದಂತಹ ಸ್ಥಿತಿಯಲ್ಲಿದ್ದೇವೆ ಎಂದರು.

ಪುಲ್ವಾಮಾ ಘಟನೆ ಬಗ್ಗೆ ನಾವು ಪ್ರಶ್ನೆ ಕೇಳುವಂತಿಲ್ಲ. ಮೋದಿ ಮಾತ್ರ ದೇಶಭಕ್ತ. ಅವರೊಬ್ಬರಿಂದಲೇ ದೇಶ ಉಳಿಯುತ್ತದೆ ಎಂದು ಬಿಂಬಿಸಲಾಯಿತು. ಮಾಧ್ಯಮಗಳು ಸೇರಿದಂತೆ ಎಲ್ಲರೂ ಮೋದಿ… ಮೋದಿ… ಎಂದು ಹುಯಿಲೆಬ್ಬಿಸಿದರು.

ಈಗ ನೋಡಿ, ದೇಶದ ಜಿಡಿಪಿ ದರ ಎಷ್ಟು ಕುಸಿದಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಇದನ್ನೆಲ್ಲ ನಾವು ಪ್ರಶ್ನಿಸಬಾರದಾ… ಸಂವಿಧಾನದಲ್ಲಿ ನಮಗೆ ಪ್ರಶ್ನಿಸುವ ಹಕ್ಕಿಲ್ಲವೇ ಎಂದು ಖಾರವಾಗಿ ನುಡಿದರು.