ಬೆಂಕಿ ಹಚ್ಚಿ, ಕಲ್ಲು ಹೊಡೆದವರು ಕಾಂಗ್ರಸಿಗರಲ್ಲ..!

ಹುಬ್ಬಳ್ಳಿ, ಸೆ.5- ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ನಡೆದ ಪ್ರತಿಭಟನೆಯಲ್ಲಿ ಕಲ್ಲು ಹೊಡೆದವರು, ಬೆಂಕಿ ಹಚ್ಚಿದವರು ನಮ್ಮ ಕಾರ್ಯಕರ್ತರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕೆಲವು ಕಿಡಿಗೇಡಿಗಳು ಸೇರಿಕೊಂಡಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ.

ಆದರೆ, ಕೆಲವು ಕಿಡಿಗೇಡಿಗಳು ಕಲ್ಲು ಹೊಡೆದು ಬೆಂಕಿ ಹಚ್ಚಿದ್ದಾರೆ. ಆದರೆ, ಇವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಹೇಳಿದರು.ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಉತ್ತರ ಕರ್ನಾಟಕ, ಉತ್ತರ ಕನ್ನಡ ಭಾಗದಲ್ಲಿ ಭೀಕರ ನೆರೆ ಹಾವಳಿಯಿಂದ ಆಗಿರುವ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಪರಿಹಾರ ಕೇಂದ್ರಗಳನ್ನು ಮುಚ್ಚಲಾಗಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಪರಿಹಾರ, ಮನೆ ಪರಿಹಾರಗಳು ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಎಂದು ಆರೋಪಿಸಿದರು.
ತಾತ್ಕಾಲಿಕ ಶೆಡ್‍ಗಳನ್ನಾದರೂ ನಿರ್ಮಿಸಿಕೊಡಿ ಎಂದು ಡಿಸಿಗಳಿಗೆ ಸೂಚಿಸಿದ್ದೆ. ಆದರೆ ಅದೂ ಆಗಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ. ಕೊಯ್ನಾದಿಂದ ನೀರು ಬಿಡುವ ವಿಚಾರಕ್ಕೆ ಸಮನ್ವಯತೆ ಕೊರತೆ ಇದೆ ಎಂದು ಅವರು ಹೇಳಿದರು.