ದಸರಾದಿಂದ ದೂರ ಉಳಿದ ಸಿದ್ದರಾಮಯ್ಯ

Spread the love

ಬೆಂಗಳೂರು, ಸೆ.29- ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿದ್ದಾರೆ. ಮೈಸೂರು ದಸರಾಗೆ ಇಂದು ಚಾಲನೆ ದೊರೆತ್ತಿದ್ದು, ಖ್ಯಾತ ಲೇಖಕರಾದ ಎಸ್.ಎಲ್.ಬೈರಪ್ಪ ಅವರು ದಸರಾ ಉದ್ಘಾಟನೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟದ ಸಚಿವರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಆದರೆ, ಕಾಂಗ್ರೆಸ್, ಜೆಡಿಎಸ್‍ನ ಬಹುತೇಕ ನಾಯಕರು ದಸರಾದಿಂದ ದೂರ ಉಳಿದಿದ್ದರು. ಜೆಡಿಎಸ್‍ನಿಂದ ಜಿ.ಟಿ.ದೇವೇಗೌಡ, ಕಾಂಗ್ರೆಸ್‍ನಿಂದ ತನ್ವೀರ್‍ಸೇಠ್ ಅವರನ್ನು ಹೊರತುಪಡಿಸಿ ಉಳಿದಂತೆ ಶಾಸಕರಾದ ಸಾ.ರಾ.ಮಹೇಶ್, ಡಾ.ಯತೀಂದ್ರ ಸೇರಿದಂತೆ ಅನೇಕರು ನಾಡಹಬ್ಬಕ್ಕೆ ಗೈರು ಹಾಜರಾಗಿದ್ದಾರೆ.

ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ನಡೆಯುವ ದಸರಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪದೇ ಪ್ರತಿ ವರ್ಷ ಭಾಗವಹಿಸುತ್ತಿದ್ದರು. ಆದರೆ, ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಕಂಡು ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಗೆದಿದ್ದಾರೆ. ಹೀಗಾಗಿ ಮೈಸೂರು ದಸರಾಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಇಂದು ಉತ್ತರ ಕರ್ನಾಟಕ ಜಿಲ್ಲೆಗಳ ಪ್ರವಾಸಕ್ಕೆ ತೆರಳಿದಿದ್ದಾರೆ.

ರಾಜ್ಯ ಸರ್ಕಾರ ಕೂಡ ಮೈಸೂರಿನವರೇ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಸರಾಗೆ ಆಹ್ವಾನಿಸುವ ಸೌಜನ್ಯವನ್ನೂ ತೋರಿಸಿಲ್ಲ. ಈ ಹಿಂದಿನ ವರ್ಷದ ದಸರಾ ವೇಳೆ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ಭಾರೀ ಸಂಭ್ರಮದಿಂದ ಓಡಾಡಿದ್ದರು. ಆದರೆ, ಈ ಬಾರಿ ಇಬ್ಬರೂ ನಾಯಕರು ಗೈರು ಹಾಜರಾಗಿದ್ದು ಕುತೂಹಲ ಕೆರಳಿಸಿದೆ.

Facebook Comments