ಬೆಂಗಳೂರು,ಆ.8- ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ, ಕಾಂಗ್ರೆಸ್ಸಿಗೆ ಆರು ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಬೇಕಾಗಿ ಟ್ವಿಟ್ಟರ್‍ನಲ್ಲಿ ಒತ್ತಾಯಿಸಿದೆ.
ದೇಶದ ಆರ್ಥಿಕತೆ ಮತ್ತು ರಾಜಕೀಯ ಪಕ್ಷದ ಅರ್ಥಶಾಸ್ತ್ರದ ನಡುವೆ ಯಾವುದೇ ಸಂಬಂಧವಿಲ್ಲವೇ? ಒಂದುಕಡೆ ಬೆಲೆ ಏರಿಕೆ, ಬಡತನದ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್ ಇನ್ನೊಂದು ಕಡೆ ಕೋಟಿಗಟ್ಟಲೆ ವ್ಯಯಿಸಿ ಜನ್ಮದಿನ ಆಚರಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಸುಪ್ರೀಂಕೋರ್ಟ್ ನಾಯಕರು ಭ್ರಷ್ಟಾಚಾರ ಸಂಬಂಧಿತವಾಗಿ ಕಾನೂನು ಕ್ರಮ ಎದುರಿಸುತ್ತಿರುವಾಗ ಕರ್ನಾಟಕ ಕಾಂಗ್ರೆಸ್ಸಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ಮೂಲಕ ಗಾಂಧಿ ಕುಟುಂಬವನ್ನು ಧಿಕ್ಕರಿಸಲಾಗುತ್ತಿದೆಯೇ? ಉತ್ತರಿಸಿ ಎಂದು ಮತ್ತೊಂದು ಪ್ರಶ್ನೆ ಹಾಕಿದೆ.
ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೂ 75 ತುಂಬಿರುವುದನ್ನು ಮರೆತದ್ದೇಕೆ? ಸೋನಿಯಾ ಗಾಂಧಿ ಅವರನ್ನು ಕಡೆಗಣಿಸಲಾಗುತ್ತಿದೆಯೇ?
ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಮ್ಮ ಜನರು ಅನುಭವಿಸುತ್ತಿರುವ ನೋವುಗಳು ವಿರೋಧ ಪಕ್ಷದ ನಾಯಕರ ಆತ್ಮಸಾಕ್ಷಿಯನ್ನು ಚುಚ್ಚಿದಂತೆ ತೋರುತ್ತಿಲ್ಲ. ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದೇಕೆ? ಎಂದು ಕಿಡಿಕಾರಿದೆ.
ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿರುವಾಗ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಯಿತು. ಈ ದುಂದುವೆಚ್ಚದ ಲೆಕ್ಕವನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದರೂ ಕೇಳುವ ಸಮಯ ಬಂದಿದೆ. ಕಾಂಗ್ರೆಸ್ ಬಳಿ ಉತ್ತರವಿದೆಯೇ? ಉತ್ತರಿಸಿ ಎಂದಿದೆ.
ತಮ್ಮ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡು ಸಿದ್ದರಾಮಯ್ಯ ಅವರು 75ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ರಾಜಕೀಯ ತೆವಲಿಗಾಗಿ ಅಲ್ಲವೇ? ಚುನಾವಣಾ ಹೊಸ್ತಿಲಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದು ಡಿಕೆಶಿ ವಿರುದ್ಧದ ರಾಜಕೀಯ ದಾಳವೇ? ಎಂದು ಪ್ರಶ್ನಿಸಿದೆ.