ಕರ್ನಾಟಕದಲ್ಲಿರುವುದು 20% ಕಮೀಷನ್ ಸರ್ಕಾರ : ಗುಂಡೂರಾವ್

ಬೆಂಗಳೂರು,ಜ.16- ರಾಜ್ಯ ಸರ್ಕಾರದ ಎಲ್ಲಾ ಸಚಿವರು ಅಂಗಡಿ ತೆರೆದು ಕೂತುಕೊಂಡಿದ್ದಾರೆ. ಇದು ಅತ್ಯಂತ ಭ್ರಷ್ಟಚಾರ ಸರ್ಕಾರ. 20% ಕಮೀಷನ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇತ್ತೀಚೆಗೆ ಉಪಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿದೆ.

ಅದನ್ನು ಮರಳಿ ಗಳಿಸಲು ರಾಜ್ಯವನ್ನು ಲೂಟಿ ಮಾಡಲು ಮುಂದಾಗಿದೆ. 6 ತಿಂಗಳ ಒಳಗಾಗಿ ತಲಾ ಒಂದೊಂದು ಸಾವಿರ ಕೋಟಿ ರೂ.ಗಳನ್ನು ಸಂಪಾದಿಸಲು ಬಹಿರಂಗವಾಗಿ ವಸೂಲಿಗೆ ಇಳಿದಿದ್ದಾರೆ. ಎಲ್ಲಾ ಸಚಿವ ಕಚೇರಿಗಳಲ್ಲಿ ಅಂಗಡಿಗಳು ಸ್ಥಾಪನೆಯಾಗಿವೆ ಎಂದರು. ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರ್ಕಾರವನ್ನು 10% ಸರ್ಕಾರ ಎಂದು ಟೀಕಿಸಿದ್ದರು.

ಈಗ ಬಿಜೆಪಿಯ ಸರ್ಕಾರ 20% ಕಮೀಷನ್ ಸರ್ಕಾರ ಆಗಿದೆ. ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಅಭಿವೃದ್ಧಿ ಸಂಪೂರ್ಣ ಕುಸಿತಗೊಂಡಿದೆ. ಇವರಿಗೆ ಅಭಿವೃದ್ಧಿ ಬೇಕಿಲ್ಲ. ಅವಕಾಶ ಸಿಕ್ಕಿದೆ ಅದನ್ನು ಬಳಸಿಕೊಂಡು ಲೂಟಿ ಮಾಡಬೇಕು ಎಂಬ ಕಾರಣಕ್ಕಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಳಂಬವಾಗುತ್ತಿ ರುವುದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಜನ ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಸಂಪನ್ಮೂಲ ಕುಂಠಿತವಾಗಿದೆ. ಕೇಂದ್ರದಿಂದ ಜಿಎಸ್‍ಟಿ ಮತ್ತು ಎನ್‍ಆರ್‍ಇಜಿ ಯೋಜನೆ ಗಳಲ್ಲಿನ ರಾಜ್ಯದ ಪಾಲು ಸರಿಯಾಗಿ ಸಿಕ್ಕಿಲ್ಲ.

ಅಭಿವೃದ್ಧಿ ಕೆಲಸಗಳಿಗೆ ಹಣ ಕುಂಠಿತವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದೆ. ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಖಾಸಗಿ ಕಾಲೇಜಿನಲ್ಲಿ ಎದುರು ಬರೆಯಲಾಗಿದ್ದ ಎನ್‍ಆರ್‍ಸಿ ವಿರುದ್ದ ಘೋಷಣೆಗಳನ್ನು ಅಳಿಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ.

ಇದುಗೂಂಡಾವರ್ತನೆ, ಇದನ್ನು ಸಹಿಸಬಾರದು. ಪಕ್ಷ ಯಾವುದೇ ಇರಲಿ ಇಂತಹ ವರ್ತನೆಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆಸುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿಯಿಂದ ಈ ರೀತಿ 2ನೇ ಬಾರಿಗೆ ದೌರ್ಜನ್ಯಗಳು ನಡೆಯುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.