ಬೆಂಗಳೂರು,ಫೆ.24- ಸಿಎಂ ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಡ್ವೊಕೇಟ್ ಜನರಲ್ ಅವರ ಮೂಲಕ ಎಸಿಬಿ ರಚನೆ ಮಾಡಿರುವುದು ಸರಿಯಿದೆ, ಎಸಿಬಿಯು ಲೋಕಾಯುಕ್ತ ಕಾಯ್ದೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿಸಿದ್ದಾರೆ. ಆದರೆ ಹೊರಗಡೆ ತಮ್ಮ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂಥಾ ದ್ವಂದ್ವ ಯಾಕೆ? ಎಂದು ಪ್ರಶ್ನಿಸಿದರು.
ಎಸಿಬಿ ರಚನೆ ಆದ ನಂತರ ಲೋಕಾಯುಕ್ತವನ್ನು ಮುಚ್ಚಿರಲಿಲ್ಲ, ಲೋಕಾಯುಕ್ತ ರಚನೆಯಾದದ್ದು 1984ರ ಲೋಕಾಯುಕ್ತ ಕಾಯ್ದೆಯ ಪ್ರಕಾರ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿರುವಾಗ ಮಾಡಿದ್ದು, 14-3-2016ರಲ್ಲಿ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಮಗ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು, ಬೇರೆ ರಾಜ್ಯಗಳಲ್ಲಿ ಕೂಡ ಎಸಿಬಿ ರಚನೆ ಮಾಡಿದ್ದರಿಂದ ನಾವು ರಾಜ್ಯದಲ್ಲೂ ಪ್ರತ್ಯೇಕ ಸಂಸ್ಥೆಯನ್ನು ರಚನೆ ಮಾಡಿದ್ದೆವು. ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಗುಜರಾತ್ ನಲ್ಲಿ ಎಸಿಬಿ ಇದೆ, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಅಲ್ಲಿ ಯಾಕೆ ಎಸಿಬಿಯನ್ನು ಇನ್ನೂ ಮುಚ್ಚಿಲ್ಲ? ಗೋವಾ, ಅಸ್ಸಾಂ, ಮಧ್ಯಪ್ರದೇಶಗಳಲ್ಲಿ ಯಾಕಿನ್ನು ಎಸಿಬಿ ಮುಚ್ಚಿಲ್ಲ? ದೇಶದ 16 ರಾಜ್ಯಗಳು ಲೋಕಾಯುಕ್ತದ ಜೊತೆಗೆ ಎಸಿಬಿಯನ್ನು ಹೊಂದಿದೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವವರು ಯಾಕೆ ಇನ್ನು ಲೋಕಪಾಲ್ ಅನು ಮಾಡಿಲ್ಲ? ಭ್ರಷ್ಟಾಚಾರದ ವ್ಯವಸ್ಥೆಗೆ ಹೆಚ್ಚು ಶಕ್ತಿ ಬಂದಿದ್ದರೆ ಅದು ಬಿಜೆಪಿ ಅವರಿಂದ.
2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುವುದಾಗಿ ಹೇಳಿದ್ದರು, ರದ್ದು ಮಾಡಿದ್ರಾ? ಕೋರ್ಟ್ ನವರು ಮಾಡಿದ್ದು. ಮೂರು ವರ್ಷಗಳ ಬಿಜೆಪಿ ಸರ್ಕಾರ ಎಸಿಬಿ ಮುಚ್ಚದೆ ಸುಮ್ಮನಿದ್ದದ್ದು ಯಾಕೆ? ಅಡ್ವೋಕೇಟ್ ಜನರಲ್ ಮೂಲಕ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಸಿರುವುದು ಯಾಕೆ? ಕೋರ್ಟಿನಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿದೆ, ಎಸಿಬಿ ರದ್ದು ಮಾಡಿ ಎಂದು ಹೇಳಿಸಬೇಕಿತ್ತು.
ಎಸಿಬಿ ಪರವಾಗಿರುವವರು ಬಿಜೆಪಿಯವರೇ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡಿದ್ದಾರೆ, ಇಲ್ಲಿ ಮಾತ್ರ ಹರಿಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
#Siddaramaiah, #KPCC, #BJPGovt,