ಬೆಂಗಳೂರು, ಜು.14- ರಾಜ್ಯಸರ್ಕಾರ ನೆರೆ ಸಂತ್ರಸ್ತರಿಗೆ ತ್ವರಿತವಾಗಿ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಜನಸಾಮಾನ್ಯರು ನಷ್ಟ ಅನುಭವಿಸಿದ ಮೇಲೆ ಈಗ ಮುಖ್ಯಮಂತ್ರಿ ಮತ್ತು ಸಚಿವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣ ದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಮುಂಚಿತವಾಗಿ ಯಾವ ಕ್ರಮ ತೆಗೆದುಕೊಳ್ಳಲ್ಲ. ಜನರಿಗೆ, ರೈತರಿಗೆ ನಷ್ಟವಾದ ಮೇಲೆ ಅದನ್ನು ನೋಡೋಕೆ ಹೋಗುತ್ತಿದ್ದಾರೆ. ಕಳೆದ ಎರಡು ವಾರದಿಂದ ಮಳೆ ಬೀಳುತ್ತಿದೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಜಿಲ್ಲೆಗಳಿಗೆ ಹೋಗಿಲ್ಲ. ಮುಖ್ಯಮಂತ್ರಿಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೋದ ಮೇಲೆ ಇವರು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರವಾಹ ಬರಲಿದೆ ಎಂದು ಗೊತ್ತಿದ್ದೂ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಕೂಡಲೇ ಪ್ರವಾಹದಿಂದ ಹಾನಿಗೊಳಗಾದ ಜನ-ಜಾನುವಾರು ಜೀವ ನಷ್ಟ, ಬೆಳೆ, ಆಸ್ತಿಪಾಸ್ತಿ ಹಾನಿಯನ್ನು ಲೆಕ್ಕಹಾಕಿ ಪರಿಹಾರ ನೀಡಬೇಕು.
2019ರ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳಿಗೇ ಇನ್ನೂ ಪರಿಹಾರ ಕೊಟ್ಟಿಲ್ಲ. 2020ರಲ್ಲಿ ಬಂದ ಪ್ರವಾಹದಿಂದ ನಷ್ಟಕ್ಕೀಡಾದವರಿಗೂ ಪರಿಹಾರ ಕೊಟ್ಟಿಲ್ಲ. ಹಿಂದೆ ಪ್ರವಾಹ ಬಂದಾಗ ಊರುಗಳ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸ್ಥಳಾಂತರ ಕಾರ್ಯ ಇನ್ನೂ ಮಾಡಿಲ್ಲ, ಹೀಗಾಗಿ ಮತ್ತೆ ಪ್ರವಾಹ ಬಂದಾಗ ಅಲ್ಲಿನ ಜನ ತೊಂದರೆ ಎದುರಿಸುತ್ತಾರೆ.
ಇದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ.
ಆರ್ಎಸ್ಎಸ್ ಆಳ ಮತ್ತು ಅಗಲ ಕೃತಿಯನ್ನು ದಾಖಲೆ ಸಮೇತ ಬರೆದಿದ್ದರೆ. ಯಾವ ಯಾವ ಕಾಲದಲ್ಲಿ ಹೆಗಡೆವಾರ್, ಗೋಲ್ವಾಲ್ಕರ್, ಸಾವರ್ಕರ್ ಆರ್ಎಸ್ಎಸ್ ಸಂಘಟನೆ ಬಗ್ಗೆ ಏನು ಹೇಳಿದ್ದರು ಅದನ್ನೇ ದಾಖಲೆ ಸಹಿತ ಬರೆದಿದ್ದರೆ.
ಆರ್ಎಸ್ಎಸ್ನವರಿಗೆ ಸತ್ಯ ಹೇಳಿದ್ರೆ ಯಾಕೆ ಕೋಪ? ಸತ್ಯ ಹೇಳಿದವರ ಮೇಲೆ ಕೇಸ್ ಹಾಕಿಸೋದು ಮಾಡ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆಯಾಗ್ತಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ನಿರ್ಬಂಧ ಹೇರಲು ಇವರು ಯಾರು? ದೇಶದ ಮೂಲಭೂತ ಸ್ವರೂಪ ಬದಲಾವಣೆ ಮಾಡಲು ಸಂಸತ್ತಿಗೂ ಅಕಾರ ಇಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿz್ದÁಗ ಅಶ್ವತ್ಥ ನಾರಾಯಣ ವಿರೋಧ ಪಕ್ಷದಲ್ಲಿದ್ದರು ಅಲ್ವಾ? ಆಗ ಏನಾದ್ರೂ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂದು ಅವರು ಮಾತನಾಡಿದ್ರಾ? ಈಗ ತಮ್ಮ ಕಾಲದಲ್ಲಿ ಹಗರಣ ಬೆಳಕಿಗೆ ಬಂದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲೂ ಆಗಿತ್ತು ಅಂದರೆ ಹೇಗೆ? ಆಗೇನು ಕಡ್ಲೆಪುರಿ ತಿಂತಿದ್ರಾ? ಮಾಹಿತಿ ಇದ್ದಿದ್ದರೆ ಆಗಲೇ ಸದನದಲ್ಲಿ ಪ್ರಸ್ತಾಪ ಮಾಡಬಹುದಿತ್ತು, ನ್ಯಾಯಾಲಯಕ್ಕೂ ಹೋಗಬಹುದಿತ್ತು.
ನನ್ನ ಹುಟ್ಟುಹಬ್ಬದ ಆಚರಣೆಗೆ ದಾವಣಗೆರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂದು ಬಿಜೆಪಿಗೆ ಸೋಲಿನ ಭಯ ಹುಟ್ಟಿಕೊಂಡಿದೆ. ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬಕ್ಕೆ ನನ್ನನ್ನೂ ಕರೆದಿದ್ರೂ, ನಾನು ಹೋಗಿದ್ದೆ. ಈಗ ನನಗೆ 75 ವರ್ಷ ತುಂಬುತ್ತಿದೆ ಎಂದು ಸ್ನೇಹಿತರು, ಹಿತೈಷಿಗಳು ಸೇರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ, ಇದಕ್ಕೇಕೆ ಭಯ ಎಂದು ಪ್ರಶ್ನಿಸಿದರು.
ಸಿದ್ದರಾಮೋತ್ಸವ ಎಂದು ಬರೆದಿದ್ದು ಮಾಧ್ಯಮಗಳು, ನಾವ್ಯಾರು ಅದನ್ನು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಇದು ಸಿದ್ದರಾಮಯ್ಯ 75ನೇ ಅಮೃತೋತ್ಸವ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿದರು.