ಸಿದ್ದು ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಪರ್ಯಾಯ ಉತ್ಸವಕ್ಕೆ ಬಿಜೆಪಿ ಸಜ್ಜು

Social Share

ಬೆಂಗಳೂರು,ಆ.5- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ದಿನೋತ್ಸವ ಭರ್ಜರಿ ಯಶಸ್ವಿಯಾದ ಬೆನ್ನಲ್ಲೇ ಬಿಜೆಪಿ ಕೂಡ ಪರ್ಯಾಯವಾಗಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ. ಹುಬ್ಬಳ್ಳಿ, ಮಂಗಳೂರು ಇಲ್ಲವೇ ಮೈಸೂರು ಕರ್ನಾಟಕ ಭಾಗದಲ್ಲಿ ಭರ್ಜರಿ ಕಾರ್ಯಕರ್ತರ ಸಮಾವೇಶ ನಡೆಸಬೇಕೆಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸಮಾವೇಶ ನಡೆಸಲು ಒಪ್ಪಿಗೆ ಸೂಚಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಲು ಸಮಾವೇಶದ ಅಗತ್ಯತೆಯನ್ನು ಪಕ್ಷದ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆಯಾದ ನಂತರ ಸ್ವಪಕ್ಷೀಯರ ವಿರುದ್ಧವೇ ಕಾರ್ಯಕರ್ತರು ತಿರುಗಿ ಬಿದ್ದು ರಾಜೀನಾಮೆ ನೀಡುತ್ತಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಸಮಾಧಾನಗೊಂಡಿರುವ ಕಾರ್ಯಕರ್ತರನ್ನು ಸಮಾಧಾನಪಡಿಸಿ ವಿಶ್ವಾಸ ಗಳಿಸಲು ಸದ್ಯದಲ್ಲೇ ಸಮಾವೇಶ ನಡೆಸಬೇಕೆಂಬ ಒತ್ತಡವೂ ಪಕ್ಷದ ಪ್ರಮುಖರಿಂದಲೇ ಕೇಳಿಬಂದಿದೆ.

ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಪ್ರಮುಖ ಸ್ಥಳವೊಂದರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಈ ಸಮಾವೇಶಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪಕ್ಷದಲ್ಲಿ ಚಿಂತನಮಂಥನ ನಡೆದಿದೆ.
ಸಿದ್ದರಾಮಯ್ಯನವರ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಇದು ಪರ್ಯಾಯವಾಗಿರದೆ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಸಮಾವೇಶವೆಂದು ಬಿಂಬಿಸಿ ಚುನಾವಣೆಗೆ ಸಿದ್ದತೆ ನಡೆಸುವುದು ಕಮಲ ನಾಯಕರ ಲೆಕ್ಕಾಚಾರವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗಿತ್ತು.

ಈ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಇದಕ್ಕೆ ಕೌಂಟರ್ ನೀಡುವುದು ಕೂಡ ಬಿಜೆಪಿಗೆ ಅನಿವಾರ್ಯವಾಗಿದೆ. ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇದೀಗ ಜಿಲ್ಲಾ ಮಟ್ಟದಲ್ಲೂ ಜನೋತ್ಸವ ಆಯೋಜಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.

ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಬಿಜೆಪಿಯ ಚಿಂತನೆ ಆಗಿದೆ.
ಸಿದ್ದರಾಮೋತ್ಸವ ನಡೆದ ದಾವಣಗೆರೆಯಲ್ಲೂ ದೊಡ್ಡ ಮಟ್ಟದಲ್ಲಿ ಜನೋತ್ಸವನ್ನು ಆಚರಿಸಲು ಬಿಜೆಪಿ ಚಿಂತನೆ ನಡೆಸಿದೆ. ಬಳಿಕ ದೊಡ್ಡಬಳ್ಳಾಪುರದಲ್ಲಿ ಸಮಾರೋಪ ಜನೋತ್ಸವ ಕಾರ್ಯಕ್ರಮ ನಡೆಸುವುದು ಬಿಜೆಪಿ ಯೋಜನೆ
ಆಗಿದೆ.

ಹೆಚ್ಚು ಜನ ಸೇರಿಸುವ ಸವಾಲು:
ಕಾಂಗ್ರೆಸ್ ಸಿದ್ದರಾಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವ ರೀತಿಯಲ್ಲಿ ಜನೋತ್ಸವಕ್ಕೂ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸುವ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸುತ್ತಿದ್ದು, ರಾಜ್ಯದಲ್ಲಿ ಸದ್ಯ ಭಿನ್ನ ರಾಜಕೀಯ ವಾತಾವರಣವಿದೆ.

ಪಕ್ಷದಲ್ಲೂ ಭಿನ್ನಾಭಿಪ್ರಾಯ ಹಾಗೂ ಅಸಹನೆ ಇದೆ. ಕಾರ್ಯಕರ್ತರಲ್ಲೂ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನಗಳು ಇವೆ. ಬಿಜೆಪಿಯ ಯುವ ಮುಖಂಡ ಪ್ರವೀಣ್ ಹತ್ಯೆ ಸಂದರ್ಭದಲ್ಲೂ ಈ ಆಕ್ರೋಶ ಎದ್ದು ಕಾಣುತ್ತಿತ್ತು. ಇಂತಹ ಸಂದರ್ಭದಲ್ಲಿ ಜನರನ್ನು ದೊಡ್ಡ ಮಟ್ಟದಲ್ಲಿ ಸೇರಿಸುವುದು ಹಾಗೂ ಈ ಮೂಲಕ ಕಾಂಗ್ರೆಸ್‍ಗೆ ತಿರುಗೇಟು ನೀಡುವುದು ಬಿಜೆಪಿಗೆ ಸವಾಲಿನ ವಿಷಯವಾಗಿದೆ.

Articles You Might Like

Share This Article