ಸಿದ್ದರಾಮಯ್ಯನವರ 75ನೇ ಜನ್ಮೋತ್ಸವಕ್ಕೆ ಭರ್ಜರಿ ತಯಾರಿ

Social Share

ಬೆಂಗಳೂರು, ಆ.1- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೆ ಜನ್ಮದಿನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸುಮಾರು 7 ಸಾವಿರಕ್ಕೂ ಹೆಚ್ಚು ವಾಹನಗಳು ಹಾಗೂ 5 ರೈಲುಗಳನ್ನು ಕಾರ್ಯಕರ್ತರಿಗಾಗಿ ಕಾಯ್ದಿರಿಸಲಾಗಿದೆ.

ದಾವಣಗೆರೆಯ ಶಾಮನೂರು ಕಾಲೇಜು ಮೈದಾನದಲ್ಲಿ ಆಗಸ್ಟ್ 3ರಂದು ನಡೆಯುವ ಸಮಾವೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಪ್ರತಿಯೊಂದು ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನ ಆಗಮಿಸಬೇಕು ಎಂದು ಸೂಚಿಸಲಾಗಿದ್ದು, ಸ್ಥಳೀಯ ನಾಯಕರು ಕಾರ್ಯಕ್ರಮಕ್ಕೆ ತೆರಳುವವರಿಗೆ ವಾಹನದ ಸೌಲಭ್ಯ ಒದಗಿಸಿದ್ದಾರೆ.

ಕೆಎಸ್‍ಆರ್‍ಟಿಸಿ ಸೇರಿದಂತೆ ಖಾಸಗಿ ವಾಹನಗಳನ್ನು ಕಾರ್ಯಕ್ರಮಕ್ಕಾಗಿ ಕಾಯ್ದಿರಿಸಲಾಗಿದೆ. ಬೀದರ್, ಗುಲ್ಬರ್ಗ, ಬೆಳಗಾವಿ, ಮೈಸೂರು ಹಾಗೂ ಇತರ ಭಾಗಗಳಿಂದ ಆಗಮಿಸುವ ಕಾರ್ಯಕರ್ತರಿಗಾಗಿ ರೈಲಿನ ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆಯ ವಸತಿ ಗೃಹಗಳು ಈಗಾಗಲೇ ಮುಂಗಡ ಬುಕ್ಕಿಂಗ್ ಆಗಿವೆ. ತಳಿರು-ತೋರಣಗಳಿಂದ ನಗರ ಸಿಂಗಾರಗೊಂಡಿದೆ. ಕರ್ನಾಟಕದ ಕೇಂದ್ರ ಭಾಗ ದಾವಣಗೆರೆಯಲ್ಲೂ ಕಾರ್ಯಕ್ರಮ ಆಯೋಜನೆಯಾಗುತ್ತಿರುವುದರಿಂದ ಬೆಂಗಳೂರಿನ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ನಾಯಕರೇ ಹೆಚ್ಚಾಗಿ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು ಕೂಡ ಇದು ಪಕ್ಷದ ಕಾರ್ಯಕ್ರಮವಾಗದೆ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯ 75ನೆ ವರ್ಷದ ಸಾರ್ಥಕ ಕ್ಷಣಗಳನ್ನು ವೈಭವೀಕರಿಸುವ ತಯಾರಿಗಳು ನಡೆದಿವೆ.

Articles You Might Like

Share This Article