ಬಿಜೆಪಿಯಲ್ಲಿ ದೊಡ್ಡ ಡ್ರಾಮಾ ನಡೆಯುತ್ತಿದೆ, ಸರ್ಕಾರ ರಚಿಸಲು ನಾವು ರೆಡಿ: ಸಿದ್ದರಾಮಯ್ಯ

ಬೆಂಗಳೂರು, ಜೂ.8- ಹೈಕಮಾಂಡ್ ಹೇಳಿದರೆ ರಾಜಿನಾಮೆ ನೀಡುತ್ತೇನೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ನಾಟಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾಯಿತರಾದ ಬಸವನಗೌಡ ತುರವಿಹಾಳ್ ಅವರನ್ನುಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ನಡೆಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ, ಬಿಜೆಪಿ ಸರ್ಕಾರದ್ದು ನೂರಕ್ಕೆ ನೂರು ವೈಪಲ್ಯವಾಗಿದೆ.

ಯಡಿಯೂರಪ್ಪ ಅವರ ವೈಪಲ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೂ ಗೊತ್ತಾಗಿದೆ, ರಾಜ್ಯದ ನಾಯಕರಿಗೂ ಗೊತ್ತಿದೆ. ಜನರಿಗೂ ಅವರ ನಾಟಕ ಗೊತ್ತಾಗಿದೆ. ಅದಕ್ಕಾಗಿ ರಾಜಿನಾಮೆಯ ನಾಟಕ ಆಡುತ್ತಿದ್ದಾರೆ ಎಂದರು. ಬಿಜೆಪಿಯಲ್ಲಿ ದೊಡ್ಡ ಡ್ರಾಮಾ ನಡೆಯುತ್ತಿದೆ. ರೇಣುಕಾಚಾರ್ಯ ಸಹಿ ಸಂಗ್ರಹಿಸಿದ್ದೇನೆ ಎನ್ನುತ್ತಿದ್ದಾರೆ. ಕೆಲವರು ಯಡಿಯೂರಪ್ಪ ಅವರ ವಿರುದ್ಧ ನಿಂತಿದ್ದಾರೆ. ಈ ಹಿಂದೆಯೂ ಬದಲಾವಣೆ ಪ್ರಯತ್ನ ನಡೆದಿತ್ತು.

ಯಡಿಯೂರಪ್ಪ ರಾಜ್ಯ ಕಂಡ ಕಳಪೆ ಮುಖ್ಯಮಂತ್ರಿ. ಅವರನ್ನು ಅಧಿಕಾರದಿಂದ ಕೆಳಗಿಸಬೇಕು ಎಂದು ಬಿಜೆಪಿಯಲ್ಲಿ ಹೊಸದಾಗಿ ಚರ್ಚೆಯಾಗುತ್ತಿಲ್ಲ. ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಪರ್ಯಾಯ ನಾಯಕ ಯಾರು ಎನ್ನುವ ಚಿಂತೆ ಬಿಜೆಪಿಯನ್ನು ಕಾಡುತ್ತಿದೆ. ಹಾಗಾಗಿ ಇಲ್ಲಿಯವರೆಗೆ ಸುಮ್ಮನಿದ್ದಾರೆ ಎಂದು ಹೇಳಿದರು.

ಹೈಕಮಾಂಡ್ ನಾಯಕರ ಮನವೋಲಿಸಲು ಯಡಿಯೂರಪ್ಪ ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂದು ತೋರಿಸುವ ಪಯತ್ನವಾಗಿ ರಾಜಿನಾಮೆ ನೀಡಲು ಸಿದ್ಧ ಎಂದಿದ್ದಾರೆ. ನಾವೇನು‌ ಸರ್ಕಾರ ಬೀಳಿಸಲ್ಲ, ಅವರಾಗಿ ಬಿದ್ದು ಹೋದರೆ ಸರ್ಕಾರ ರಚಿಸಲು ನಾವು ರೆಡಿ ಅಥವಾ ಚುನಾವಣೆ ಎದುರಿಸಲು ಸಿದ್ಧ ಎಂದರು.

ರಾಜ್ಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅವರಿಗೆ ಪರಿಹಾರ ಕೊಡಿ ಅಂತ ನಾವು ಕೇಳುತ್ತಲೇ ಇದ್ದೇವೆ. 10 ಕೆ.ಜಿ ಅಕ್ಕಿ, ೧೦ ಸಾವಿರ ಕೊಡಿ ಎಂದು ಹೇಳುತ್ತಿದ್ದೇವೆ. ಆದರೆ ಸರ್ಕಾರ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿದರೂ, ಆದರೆ ಕಠಿಣವಾಗಿ ಲಾಕ್ ಡೌನ್ ನಡೆಯಲಿಲ್ಲ. ಅದಕ್ಕಾಗಿಯೇ 28 ದಿನ ಕಳೆದರೂ ಸೋಂಕು ನಿಯಂತ್ರಣಕ್ಕೆ ಬರದೆ ಲಾಕ್ ಡೌನ್ ಮುಂದುವರೆಸುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಈಗ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರು ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲ್ಲುವುದು ಖಚಿತ, ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಡುವೆ ಸಂಸದ ಪ್ರತಾಪ್ ಸಿಂಹ ಎತ್ತಿಕಟ್ಟಿ ಜಟಾಪಟಿಯಾಗುವಂತೆ ಮಾಡಿದರು. ರಾಜಕಾರಣಿಗಳು ಒಬ್ಬರನ್ನ ಹೊಗಳುವುದು, ಮತ್ತೊಬ್ಬರನ್ನು ತೆಗೆಳುವ ಕೆಲಸ ಮಾಡಬಾರದು. ಶಿಲ್ಪನಾಗ್ ರನ್ನು ಮೈಸೂರು ಜಿಲ್ಲಾಧಿಕಾರಿ ಮಾಡುವ ಪ್ರಯತ್ನವನ್ನು ಬಿಜೆಪಿಯವರು ಮಾಡಿದ್ದರು. ಭೂಹಗರಣದ ಬಗ್ಗೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಅಧಿಕಾರಿಗಳಿಗೆ ಮಾಧ್ಯಮಗಳ ಎದುರು ಹೇಳಿಕೆ ನೀಡುವ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಮೊದಲಿನಿಂದಲೂ ಒತ್ತಾಯ ಮಾಡುತ್ತಲೇ ಇತ್ತು. ನಿನ್ನೆ ಪ್ರಧಾನಿ ಅದನ್ನ ಘೋಷಣೆ ಮಾಡಿದ್ದಾರೆ ಎಂದರು. ಖಾಸಗಿ ಶಾಲೆಗಳಿಂದ ಬಲವಂತವಾಗಿ ಶುಲ್ಕ ವಸೂಲಿ ನಡಯುತ್ತಿದೆ. ಸಚಿವರು, ಅಧಿಕಾರಿಗಳು ಕಂಡು ಕಾಣದಂತೆ ಕುಳಿತು ಶುಲ್ಕ ವಸೂಲಿಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡುವುದು, ಪಿಯು ಪರೀಕ್ಷ ಮಾಡುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ಪ್ರಕಾರ ಪಿಯುಸಿ ಪರೀಕ್ಷೆನೂ ಮಾಡಬೇಕು ಎಂದರು. ಆರ್ ಟಿ ಜಿ ಎಸ್ ಮೂಲಕ ಸಿಎಂ ಕುಟುಂಬಸ್ಥರು ಲಂಚ ಪಡೆದ ಆರೋಪ ಇದೆ. ಕಾಂಗ್ರೆಸ್ ಇದರ ಬಗಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿತ್ತು. ನಾನು ಮಾತನಾಡಿದ್ದೆ. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಇದರ ಕುರಿತು ಸಮಗ್ರ ವಿಚಾರಣೆ ನಡೆಸಬೇಕಿದೆ ಎಂದರು.

ಮಸ್ಕಿ ವಿಧಾನಸಭಾ ಕ್ಷೇತ್ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಏನು ಅಭಿವೃದ್ಧಿಯನ್ನೂ ಮಾಡಿರಲಿಲ್ಲ. ಕಾಂಗ್ರೆಸ್ ಗೆ ಮೋಸ ಮಾಡಿ ಹೋಗಿ ಬಿಜೆಪಿ ಸೇರಿದರು. ಹಾಗಾಗಿ ಜನ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡಿದ್ದರಿಂದ ನಮ್ಮ ಅಭ್ಯರ್ಥಿ ಬಸವನಗೌಡ ತುರವಿಹಾಳ್ ಗೆದ್ದಿದ್ದಾರೆ, ಪಕ್ಷಾತರಿಗಳಿಗೆ ತಕ್ಕ ಪಾಠ ಜನ ಕಲಿಸಿದ್ದಾರೆ ಎಂದರು.