ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ : ಬಿಜೆಪಿ

Social Share

ಬೆಂಗಳೂರು,ಅ.13- ನೀವು ಮೋರ್ ಸ್ಟ್ರಾಂಗ್ ಎಂದು ಹೇಳಿಕೊಂಡಿದ್ದೀರಿ, ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ ಎಂದು ಬಿಜೆಪಿ ಸಿದ್ದರಾಮಯ್ಯನವರಿಗೆ ತಿರುಗೇಟು ಕೊಟ್ಟಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನಮ್ಮ ಪಕ್ಷದ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಈ ಇಳಿ ವಯಸ್ಸಿನಲ್ಲಿ ಕಷ್ಟವಾದರೂ ಬಲವಂತದ ಪಾದಯಾತ್ರೆ ಮಾಡುತ್ತಿದ್ದೀರಾದ ಎಂದು ಕುಹುಕವಾಡಿದೆ.

ಪಕ್ಷ ಕಟ್ಟಿ ಬೆಳೆಸಿದ ಹಿರಿಯರು ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಒಬ್ಬೊಬ್ಬರಾಗಿ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತಿರುವಾಗ ಅದನ್ನು ಸರಿ ಮಾಡುವುದು ಬಿಟ್ಟು ದೇಶಕ್ಕೆ ಭವಿಷ್ಯ ಕೊಡುತ್ತೇನೆ ಎಂದು ಪಾದಯಾತ್ರೆ ಮಾಡಿದರೆ ನೀವು ನಡೆದ ಬೀದಿಗಳ ಜನ ಕೂಡ ನಿಮ್ಮನ್ನು ನಂಬುವುದಿಲ್ಲ ಎಂದು ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲವೇ? ಎಂದು ವ್ಯಂಗ್ಯವಾಡಿದೆ.

ಯುಪಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಗಳು ನಡೆದರೂ ಉಗ್ರವಾದದ ವಿರುದ್ಧ ಕ್ರಮ ಜರುಗಿಸಲಿಲ್ಲ. ಕಾಂಗ್ರೆಸ್‍ನ ನಿಜವಾದ ಗುಣ – ಭಾರತ್ ತೋಡೋ. ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಹಿರಿಯರಾದ ಮಾಧವರಾವ್ ಸಿಂಯಾ, ರಾಜೇಶ್ ಪೈಲೆಟ್ ಸಹಿತ ಅನೇಕ ನೈಜ ಮುಖಂಡರ ಅಂತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ರಾಹುಲ್ ಅವರಿಗೆ ಪ್ರಶ್ನಿಸಿ ಸಮರ್ಪಕ ಉತ್ತರ ಸಿಕ್ಕಿದರೆ ಮಾತ್ರ ಹೆಜ್ಜೆ ಹಾಕಿ. ಆತ್ಮವಂಚನೆಯ ಪಾದಯಾತ್ರೆ ಯಾಕೆ ಎಂದು ಪ್ರಶ್ನಿಸಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಯುವನಾಯಕ ಸಚಿನ್ ಪೈಲೆಟ್ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಕೊಟ್ಟ ಭರವಸೆಯನ್ನು ಯಾರದ್ದೋ ಬ್ಲ್ಯಾಕ್‍ಮೇಲ್‍ಗೆ ಹೆದರಿ ಹಿಂದೆ ಪಡೆದುಕೊಂಡ ರಾಹುಲ್ ಗಾಂಧಿ ಅವರಿಗೆ ತಮ್ಮ ಪಕ್ಷದಲ್ಲಿಯೇ ಯುವಕರಿಗೆ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದೆ.

ಹೀಗಿರುವಾಗ ದೇಶದ ಯುವಜನಾಂಗಕ್ಕೆ ಅವರು ಏನು ಭವಿಷ್ಯ ನೀಡಬಲ್ಲರು? ಬೆಳಿಗ್ಗೆ ಎದ್ದ ತಕ್ಷಣ ಎಲ್ಲರೂ ದೇವರನ್ನು ನೆನೆಯುತ್ತಾರೆ. ಆದರೆ, ಬಾಲಕನ ಜೊತೆ ಓಡುವ ರಾಹುಲ್ ಗಾಂಧಿ ಅವರು ಬಿಜೆಪಿ ನಾಯಕರ ಜಪ ಮಾಡುತ್ತಿರುವುದನ್ನು ನೋಡಿದರೆ, ಬಿಜೆಪಿ ನಾಯಕರನ್ನೇ ದೇವರು ಅಂದುಕೊಂಡ ಹಾಗಿದೆ ಎಂದು ವ್ಯಂಗ್ಯವಾಡಿದೆ.

Articles You Might Like

Share This Article