40 ವರ್ಷ ರಾಜ್ಯವಾಳಿದ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ?: ಸಿದ್ದುಗೆ ಬಿಜೆಪಿ ಗುದ್ದು

Social Share

ಬೆಂಗಳೂರು,ಜ.3- ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿರುಗೇಟು ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ 1968ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದೀರಿ.
ಹಾಗಾದರೆ ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತಿತ್ತು? ಆ ನಂತರವು 40 ವರ್ಷಗಳ ಕಾಲ ರಾಜ್ಯವಾಳಿದ ನಿಮ್ಮ ಕಾಂಗ್ರೆಸ್ ಪಕ್ಷ ಯಾಕೆ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ. ನಿಮ್ಮದೇ ಪಕ್ಷದ ಸರ್ಕಾರ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ನೀವು ಉತ್ತರ ಕೊಡಬೇಕಲ್ಲವೇ? ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುವುದೇ ನಿಮ್ಮ ಕಾಯಕವಾಗಿದೆ. ಈಗಾಗಲೇ ಕೇಂದ್ರದಲ್ಲಿನ ನಮ್ಮ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ ತಾತ್ವಿಕ ಅನುಮೋದನೆ ಕೊಟ್ಟಿರುವುದನ್ನು ಯಾಕೆ ಜನರ ಎದುರು ಹೇಳದೇ ಮರೆಮಾಚಿದಿರಿ? ಇದೇ ಅಲ್ಲವೇ ನಿಮ್ಮ ಸುಳ್ಳಿನ ರಾಜಕೀಯದ ಮೇಲಾಟ? ಎಂದು ವ್ಯಂಗ್ಯವಾಡಿದ್ದಾರೆ.
ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು ಎನ್ನುವ ರಾಜಕೀಯ ಕುಟಿಲ ನೀತಿ ನಿಮ್ಮದು, ನಿಮ್ಮ ಪಕ್ಷದ್ದು ಎಂಬುದು ಸತ್ಯವಿದಿತ ಎಂದು ಲೇವಡಿ ಮಾಡಿದ್ದಾರೆ. ನೀವು ಅಧಿಕಾರಕ್ಕೆ ಬರುವ ದೃಷ್ಟಿ ಯಿಂದ ಜನರಿಗೆ ಸುಳ್ಳುಗಳ ಸರಮಾಲೆ ಪೋಣಿಸುತ್ತಾ ಅವರನ್ನು ದಿಕ್ಕು ತಪ್ಪಿಸಲು ಪಾದಯಾತ್ರೆ ಮಾಡಲು ಹೊರಟಿದ್ದೀರಿ.
ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಸೇ ಅಧಿಕಾರದಲ್ಲಿದ್ದಾಗಲೂ ಯೋಜನೆಯ ಬಗ್ಗೆ ತುಟಿ ಬಿಚ್ಚದ ನಿಮ್ಮ ನಾಯಕರ ಬಗ್ಗೆ ಸ್ವಲ್ಪ ಜನರಿಗೂ ತಿಳಿಸಿ ಸಿದ್ದರಾಮಯ್ಯನವರೇ? ಎಂದಿದ್ದಾರೆ. ನಿಮ್ಮ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಈ ರ್ನಿಧಿಷ್ಟ ಯೋಜನೆಗೆ ಏಕೆ ವಿರೋಧ ಮಾಡುತ್ತಿದ್ದಾರೆ? ನಿಮ್ಮ ಪಕ್ಷ ಬೆಂಬಲದ ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದೆ.
ಅವರಿಂದ ಒಂದು ಹೇಳಿಕೆ ಕೊಡಿಸಿ ಸಿದ್ದರಾಮಯ್ಯನವರೇ ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು. ಆಗ ಕಾಂಗ್ರೆಸ್ ಬಂಡವಾಳ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಒಂದು ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಯೋಜನೆ ಪೂರ್ಣಗೊಳ್ಳಲು 54 ವರ್ಷ ಬೇಕೆ? ಸುಳ್ಳಿಗೂ ಒಂದು ಮಿತಿ ಇರಬೇಕು. ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಜನರಿಗೂ ಗೊತ್ತು.
ನಿಮ್ಮ ಕಪಟ ರಾಜಕೀಯ ನಾಟಕ ಜನರಿಗೆ ಅರ್ಥವಾಗುತ್ತಿದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡದೇ ಸತ್ಯ ಹೇಳಿ ಸಿದ್ದರಾಮಯ್ಯ ನವರೇ ಎಂದು ಒತ್ತಾಯಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಕ್ರಿಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ.
ನಾನೂ ಸಹ ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ನೀರಿನ ವಿಷಯದಲ್ಲಿ ನಿಮ್ಮ ರೀತಿ ರಾಜಕೀಯ ಮಾಡುತ್ತಿಲ್ಲ. ನಿಮ್ಮ ಸರ್ಕಾರವಿದ್ದಾಗ ಚಿದಂಬರಂ ಮತ್ತು ಸೋನಿಯಾಗಾಂಧಿ ಹೆದರಿಕೆಯಿಂದ ಸಿದ್ದರಾಮಯ್ಯನವರು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದೆನಿಸುತ್ತದೆ.
ಈಗ ನೀವು ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ವಿಷಯ ಎಂದಿದ್ದಾರೆ.

Articles You Might Like

Share This Article