ಸರ್ಕಾರದ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ : ಸಿದ್ದರಾಮಯ್ಯ

Social Share

ಬೆಂಗಳೂರು, ಜ.11- ಬಿಜೆಪಿಯ ಸಚಿವರು, ಶಾಸಕರು ರ್ಯಾಲಿ, ಸಾರ್ವಜನಿಕ ಸಮಾರಂಭ ಮಾಡಿದರೆ ಯಾವುದೇ ಕೇಸು ಹಾಕುವುದಿಲ್ಲ. ಜನರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ತಡೆಯಲು 30 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಸರ್ಕಾರದ ಈ ಗೊಡ್ಡು ಬೆದರಿಕೆಗೆಲ್ಲಾ ನಾವು ಜಗ್ಗುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕನಕಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸುಳ್ಳು ಜಾಹಿರಾತು ನೀಡಿ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ಮೇಕೆದಾಟು ಯೋಜನೆಗಾಗಿ ಬೇರೇನನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದೆ, ನಿನ್ನೆ ಪಾದಯಾತ್ರೆಯಲ್ಲಿ ಭಾಗವಹಿಸಲಿಲ್ಲ. ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಂಡು, ನಿನ್ನೆ ಇಡಿ ದಿನ ವಿಶ್ರಾಂತಿ ಪಡೆದೆ ಈಗ ಜ್ವರ ಬಿಟ್ಟಿದೆ. ಇಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.
ಎರಡು ದಿನಗಳ ಕಾಲ ಯಶಸ್ವಿ ಪಾದಯಾತ್ರೆ ನಡೆದಿದೆ.
ಡಿ.ಕೆ.ಶಿವಕುಮಾರ್ ಜೊತೆ ಅನೇಕ ಮುಖಂಡರು, ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದಾರೆ. ನಿನ್ನೆ ಚಾಮರಾಜನಗರ ಜಿಲ್ಲಾಯಿಂದ ನಮ್ಮ ಕಾರ್ಯಕರ್ತರು ಭಾಗವಹಿಸಿದ್ದರು. ಇಂದು ಮೈಸೂರು ಜಿಲ್ಲಾಯ 11 ವಿಧಾನಸಭಾ ಕ್ಷೇತ್ರ ಕಾರ್ಯಕರ್ತರು ಭಾಗವಹಿಸಿದ್ದಾರೆ. ನಾಳೆ ಹಾಸನ, ತುಮಕೂರು ಕೋಲಾರ ಸೇರಿದಂತೆ ಹಲವು ಜಿಲ್ಲಾಗಳ ಕಾರ್ಯಕರ್ತರು ಭಾಗಿಯಾಗಲಿದ್ದ್ದಾರೆ.
ರಾಜ್ಯಾದ್ಯಂತ ಎಲ್ಲ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಜನರ ಪಾಲ್ಗೊಳ್ಳುವಿಕೆಯಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬ ಭಾವನೆ ದೃಢವಾಗುತ್ತಿದೆ. ಯೋಜನೆಯಿಂದ ರೈತರಿಗೆ, ಬೆಂಗಳೂರು ನಾಗರಿಕರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಸರ್ಕಾರದ ಯಾವುದೇ ಬೆದರಿಕೆಗೂ ನಾವು ಜಗ್ಗುವುದಿಲ್ಲ. 11 ದಿನಗಳ ಕಾಲ ಪಾದಯಾತ್ರೆ ಮಾಡೇ ಮಾಡುತ್ತೇವೆ. ರಾಜ್ಯದಲ್ಲಿ ಕೋವಿಡ್ ನಮ್ಮಿಂದ ಹೆಚ್ಚಾಗುವುದಿಲ್ಲ. ಅದು ತನ್ನಷ್ಟಕ್ಕೆ ತಾನೇ ಹೆಚ್ಚಾಗಲಿದೆ. ಮೊದಲು ಬಿಜೆಪಿಯವರು ನಿಯಮಗಳನ್ನು ಪಾಲನೆ ಮಾಡಲಿ ಎಂದು ಹೇಳಿದರು. ಮೇಕೆದಾಟು ನಮ್ಮ ಸರ್ಕಾರ ರೂಪಿಸಿದ ಯೋಜನೆ.
ಇದನ್ನು ಪ್ರಾರಂಭ ಮಾಡಿದ್ದೆ ನಾವು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಆರಂಭ ಮಾಡಿಲ್ಲ. 1968ರಲ್ಲ ಮೇಕೆದಾಟು ಯೋಜನೆ ಪ್ರಸ್ತಾಪವಾಗಿತ್ತು. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಯೋಜನೆಗೆ ಚಾಲನೆ ಸಿಕ್ಕಿರಲಿಲ್ಲ. ಬಿಜೆಪಿಯವರಿಗೆ ನಿಜವಾಗಿ ಕಾಳಜಿ ಇದ್ದರೆ 2008ರಲ್ಲಿ ಅಕಾರಕ್ಕೆ ಬಂದಾಗಲೇ ಯೋಜನೆ ರೂಪಿಸ ಬಹುದಿತ್ತು. ಆದರೆ ಮಾಡಲಿಲ್ಲ.
2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸೆಪ್ಟಂಬರ್‍ನಲ್ಲಿ ಯೋಜನಾ ವರದಿ ತಯಾರಿಕೆಗೆ ಚಾಲನೆ ನೀಡಲಾಯಿತು. ಕಾವೇರಿ ನದಿ ವಿವಾದದಲ್ಲಿ ನ್ಯಾಯಾಲಯಗಳು ನೀಡಿದ ತೀರ್ಪನ್ನು ಆಧರಿಸಿ ರಾಜ್ಯದ ಪರವಾಗಿ ವಾದಿಸುತ್ತಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ಜೊತೆ ಚರ್ಚೆ ಮಾಡಿ, ಬಳಿಕ ಯೋಜನೆಗೆ ಚಾಲನೆ ನೀಡಲಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವಧಿಯಲ್ಲಿ ಪರಿಷ್ಕøತ ವಿಸ್ತೃತಾ ಯೋಜನಾ ವರದಿ ತಯಾರಾಗಿದ್ದು, ಆಗ ಯೋಜನಾ ಗಾತ್ರ ಆರು ಸಾವಿರ ಕೋಟಿಯಿಂದ 9 ಸಾವಿರ ಕೋಟಿಗೆ ಹೆಚ್ಚಳವಾಗಿದೆ ಎಂದು ವಿವರಿಸಿದರು.
ಮೇಕೆದಾಟು ಯೋಜನೆಗೆ ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಚೋಳ ಪ್ರತಿದಿನ ಅನಗತ್ಯವಾಗಿ ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲ ಪಡಿಸಲು ಒತ್ತು ನೀಡಲಾಗುತ್ತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ನೋಡಿದರೆ, ಅದು ಅರ್ಥವಾಗುತ್ತದೆ. ತಮಿಳುನಾಡಿನ ಜೊತೆ ಸೇರಿ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಯಲ್ಲಿ ನಮ್ಮ ಯಾವ ಪ್ರತಿಷ್ಠೆಯೂ ಇಲ್ಲ. ಕಾಂಗ್ರೆಸ್‍ನಿಂದ ವಿಳಂಬವಾಯಿತು ಎಂದು ಬಿಜೆಪಿಯವರು ಈಗ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದರು. ಈಗ ಗೋವಿಂದ ಕಾರಜೋಳ ಸಚಿವರಾಗಿದ್ದಾರೆ. ನೀವು ಏನು ಮಾಡಿದ್ದೀರಾ ಎಂದ ಅವರು, ಪ್ರತಿ ದಿನ ಹೇಳಿಕೆ, ಜಾಹಿರಾತು ನೀಡುವುದೇ ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದೆ. ಪರಿಸರ ಇಲಾಖೆ ಅನುಮತಿ ಪಡೆದು ಏಕೆ ಯೋಜನೆ ಆರಂಭಿಸಿಲ್ಲ. ಬಿಜೆಪಿಗೆ ರಾಜ್ಯದ ಜನ 25ಸಂಸದರನ್ನು ಗೆಲ್ಲಿಸಿದ್ದಾರೆ. ಅವರಿಂದ ರಾಜ್ಯಕ್ಕಾದ ಲಾಭವೇನು? ಅವರಿಗೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ಇಲ್ಲವೆ ಎಂದು ತಿರುಗೇಟು ನೀಡಿದರು.
68ಟಿಎಂಸಿ ನೀರನ್ನು ಶೇಖರಣೆ ಮಾಡುವ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ಆದರೂ ಅವರು ತಕರಾರು ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್ ತಕರಾರರನ್ನು ಮಾನ್ಯ ಮಾಡಿಲ್ಲ, ತಮಿಳುನಾಡಿನ ಮನವಿಯಂತೆ ತಡೆಯಾಜ್ಞೆ ನೀಡಿಲ್ಲ. ಹಸಿರು ಪೀಠ, ಕಾವೇರಿ ಪ್ರಾಕಾರ ಸೇರಿ ಯಾವ ನ್ಯಾಯಾಂಗ ಸಂಸ್ಥೆಯಲ್ಲೂ ಯೋಜನೆಗೆ ತಡೆಯಾಜ್ಞೆ ಇಲ್ಲ. ಬಹಳ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಪೂರೈಸಬೇಕಿದೆ. ಅದಕ್ಕಾಗಿ ಯೋಜನೆ ಜಾರಿಯಾಗಬೇಕು ಎಂದರು.
ಕಲಬುರಗಿಯಲ್ಲಿ ಬಿಜೆಪಿ ಮುಖಂಡ ಸುಭಾಷ್ ಗುತ್ತಿಗೆದಾರ ರ್ಯಾಲಿ ಮಾಡಿದ್ದಾರೆ. ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಜನರ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿದ್ದಾರೆ. ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಸಾರ್ವಜನಿಕ ಸಮಾರಂಭ ಮಾಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಅಲ್ಲಿ ಎರಡು ಸಾವಿರ ಜನ ಸೇರಿದ್ದರು, ಆಗ ಕೇಸು ಹಾಕಲಾಗಿದೆಯೇ ? ಎಂದು ಪ್ರಶ್ನಿಸಿದರು.
ಸರ್ಕಾರ ಪಾದಯಾತ್ರೆಯನ್ನು ತಡೆಯಲು ಯತ್ನಿಸುತ್ತಿದೆ. ಈ ಹೋರಾಟದಿಂದ ಕಾಂಗ್ರೆಸ್‍ಗೆ ಲಾಭವಾಗಲಿದೆ ಎಂದು ಬಿಜೆಪಿ ನಾನಾ ಹುನ್ನಾರ ನಡೆಸುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿಯವರೆ ಹೆಚ್ಚು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೊನ್ನೆವರೆಗೂ ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಾವು ನಿಯಮ ಪಾಲನೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡುವಂತೆ ಸಲಹೆ ನೀಡುತ್ತಿದ್ದೇವೆ. ಸರ್ಕಾರ ಮೊದಲು ರೋಗ ನಿಯಂತ್ರಣ ಮಾಡಲಿ, ಒಂದು ವೇಳೆ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಜಾರಿಯಾಗುವ ಪರಿಸ್ಥಿತಿ ನಿರ್ಮಾಣವಾದರೆ ಅದಕ್ಕೆ ಬಿಜೆಪಿ ಸರ್ಕಾರವೆ ಹೊಣೆ, ರಾಜಕೀಯಕ್ಕಾಗಿ ನಮ್ಮ ಮೇಲೆ ಆರೋಪ ಮಾಡುವುದನ್ನು ಬಿಡಲಿ ಎಂದು ತರಾಟೆಗೆ ತೆಗೆದುಕೊಂಡರು.
ಈ ಮೊದಲು ಒಂದು ಬಾರಿ ಲಾಕ್‍ಡೌನ್‍ನಿಂದ ಜನರನ್ನು ಸಂಕಷ್ಟಕ್ಕೆ ನೂಕಲಾಗಿತ್ತು. ಆಗ ಮಡಿವಾಳರಿಗೆ, ಕ್ಷೌರಿಕರಿಗೆ, ಚಾಲಕರಿಗೆ ಆರ್ಥಿಕ ನೆರವು ನೀಡುವುದಾಗಿ ಹೇಳಿ, ಈವರೆಗೂ ಪರಿಹಾರ ನೀಡಿಲ್ಲ. ಯಡಿಯೂರಪ್ಪ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ ಎಂದು ಹೇಳಿದರು. ವಿವಾದಿತ ಮೂರು ಕೃಷಿಕಾಯ್ದೆಗಳ ತಿದ್ದುಪಡಿಗಳನ್ನು ರೂಪಿಸಿ ರೈತರು ದೆಹಲಿಯಲ್ಲಿ ಒಂದು ವರ್ಷ ಚಳುವಳಿ ಮಾಡುವಂತೆ ಪ್ರಧಾನಿ ಮೋದಿ ಮಾಡಿದರು, ಅದರಿಂದ 702 ಜನ ಪ್ರಾಣ ಕಳೆದುಕೊಂಡರು. ಅದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
ಕೋವಿಡ್ ಮೊದಲನೆ ಅಲೆಯಲ್ಲಿ ಅಮೆರಿಕಾದ ಆಗಿನ ಅಧ್ಯಕ್ಷ ಟ್ರಂಪ್ ಅವರನ್ನು ದೇಶಕ್ಕೆ ಕರೆದು ಕೊಂಡು ಬಂದಿದ್ದ , ನಮ್ಮಲ್ಲಿ ಕೊವೀಡ್ ಹೆಚ್ಚಾಗಲು ಕಾರಣ. ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಪೂರೈಸದೆ ಜನ ಸಾಯುವಂತೆ ಮಾಡಿದರು. ನಂತರ ಆಮ್ಲಜನಕ ಕೊರತೆಯಿಂದ ಯಾರು ಸತ್ತಿಲ್ಲ ಎಂದು ಆ ಸಚಿವರೇ ಹೇಳಿಕೆ ನೀಡಲಾರಂಭಿಸಿದರು.
ಆ ಸಚಿವನಿಗೆ ಪ್ರಶಸ್ತಿ ಮೇಲೆ ಪ್ರಶಸ್ತಿಗಳು ಬಂದವು ಎಂದು ಲೇವಡಿ ಮಾಡಿದರು.ನಿನ್ನೆ ಡಿ.ಕೆ ಶಿವಕುಮಾರ್ ಅವರ ಗಂಟಲು ದ್ರವ ಮಾದರಿ ತಗೊಂಡು ಬರಲು ಸರ್ಕಾರ ವೈದ್ಯಾಕಾರಿಯನ್ನು ಕಳುಹಿಸಿತ್ತು. ಬಹುಶಃ ಮಾದರಿ ಪರೀಕ್ಷೆ ಮಾಡಿ ಕೊರೊನಾ ಇದೆ ಎಂದು ಸುಳ್ಳು ವರದಿ ಕೊಡುವ ಯೋಚನೆ ಮಾಡಿಕೊಂಡಿದ್ದರೋ ಏನೋ. ಎರಡು ದಿನ ಬಿಸಿಲಿನಲ್ಲಿ ನಡೆದರೂ ಡಿ.ಕೆ ಶಿವಕುಮಾರ್ ಕಲ್ಲುಗುಂಡಿನ ಹಾಗೆ ಇದ್ದಾರೆ.
ಈ ಹಿಂದೆ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದಾಗ ಕಡೇ ದಿನ ಐದು ಲಕ್ಷ ಜನ ಸೇರಿದ್ದರು. ಈಗಲೂ ಜನ ನಮ್ಮ ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಬರಲು ಆರಂಭಿಸಿದ್ದಾರೆ. ಇದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಳ್ಳಾರಿ ಪಾದಯಾತ್ರೆ ನೆನಪಾದ್ರೆ ಬಸವರಾಜ ಬೊಮ್ಮಾಯಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ವೇನೋ..?
ನಮ್ಮ ಮೇಲೆ ಸರ್ಕಾರ ಕಾನೂನಿನ ಕ್ರಮಕೈಗೊಳ್ಳಲು ಹೊರಟರೆ, ನಾವೂ ಕಾನೂನಿನ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಏನೇನು ಕೇಸ್ ದಾಖಲಿಸುತ್ತಾರೋ ದಾಖಲಿಸಲಿ, ನಾವೂ ಕಾನೂನು ಹೋರಾಟ ಮಾಡುತ್ತೇವೆ.
ಕೊರೊನಾ ಬರೀ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಹೆಚ್ಚಾಗ್ತಾ ಇದೆ. ನಾವು ಪಾದಯಾತ್ರೆ ಮಾಡುತ್ತಿರೋದು ಕರ್ನಾಟಕದಲ್ಲಿ. ಕೊರೊನಾ ಸೋಂಕು ಹೆಚ್ಚಾಗುವುದಕ್ಕೂ ನಮ್ಮ ಪಾದಯಾತ್ರೆಗೂ ಸಂಬಂಧ ಇಲ್ಲ ಎಂದರು.

Articles You Might Like

Share This Article