ಬೆಂಗಳೂರು, ಆ.20- ಧರ್ಮ ವಿಭಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಶ್ಚಾತ್ತಾಪವಾಗಿ ಮನಸ್ಸು ಪರಿವರ್ತನೆಯಾಗಿದ್ದರೆ ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಮತ್ತು ರಂಭಾಪುರಿ ಶ್ರೀಗಳ ನಡುವೆ ನಡೆದಿರುವ ಮಾತುಕತೆ. ಅಲ್ಲಿ ಏನು ನಡೆದಿದೆ ಎಂಬುದು ಹೊರ ಜಗತ್ತಿಗೆ ಗೊತ್ತಿಲ್ಲ ಎಂದರು. ಒಂದು ವೇಳೆ ಸಿದ್ದರಾಮಯ್ಯನವರಿಗೆ ನಾನು ವೀರಶೈವ ಲಿಂಗಾಯಿತ ಧರ್ಮ ಪ್ರತ್ಯೇಕ ಮಾಡಲು ಮುಂದಾಗಿದ್ದು ತಪ್ಪು ಎಂಬ ಅರಿವಾಗಿದ್ದರೆ ಸಂತೋಷ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ನಿನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಶ್ರೀಗಳನ್ನು ಭೇಟಿಯಾಗಿದ್ದರು. ರಂಭಾಪುರಿ ಮಠದ ಶ್ರೀಗಳ ಜೊತೆ ಮಾತುಕತೆ ಸಂದರ್ಭದಲ್ಲಿ ನಾನು ಧರ್ಮ ಒಡೆಯಲು ಮುಂದಾಗಿರಲಿಲ್ಲ. ಕೆಲವರು ನನ್ನ ದಾರಿ ತಪ್ಪಿಸಿದ್ದರು ಎಂದು ವಿಷಾದಿಸಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.