ಬೆಂಗಳೂರು, ಫೆ.7- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಾಳೆಯಿಂದ ಎರಡು ದಿನಗಳ ಕಾಲ ಗೋವಾ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
ಸಿದ್ದರಾಮಯ್ಯ ಅವರು ನಾಳೆ ಸಂಜೆ ಮರಮಗಾವ್, ವಾಸ್ಕೋ, ಕಾರ್ತಲಿಮ್ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದು, ಫೆಬ್ರವರಿ 9ರಂದು ಬೆಳಗ್ಗೆ ಗೋವಾದ ಕ್ಯಾಂಪ್ ಆಫೀಸ್‍ನಲ್ಲಿ ನಡೆಯುವ ಚುನಾವಣಾ ವೀಕ್ಷಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಗೋವಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನೆರೆ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖಂಡರನ್ನು ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣಾ ವಿಕ್ಷಕರನ್ನಾಗಿ ರಾಜ್ಯದ 30ಕ್ಕೂ ಹೆಚ್ಚು ಮಂದಿ ನಾಯಕರನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ.
ಕರ್ನಾಟಕದ ಮಾಜಿ ಸಚಿವ ದಿನೇಶ್ ಗುಂಡುರಾವ್ ಅವರು ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ವಾರ ಗೋವಾಕ್ಕೆ ತೆರಳಿ ಪ್ರಚಾರ ನಡೆಸಿದ್ದರು. ಈಗ ಸಿದ್ದರಾಮಯ್ಯ ಅಕಾಡಕ್ಕೀಳಿದಿದ್ದಾರೆ.
