ಬೆಂಗಳೂರು,ಆ.19-ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಎಲ್ಲರೂ ಸಂಯಮದಿಂದ ಮಾತನಾಡಬೇಕು, ಎಲ್ಲರೂ ರಾಜಕರಣ ಮಾಡೋಣ. ಶಾಂತಿ ಕಾಪಾಡಲು ಯೋಚಿಸಿ ಮಾತನಾಡಬೇಕು ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಸಾರ್ವಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾಗ ನಾವು ಹುಟ್ಟಿರಲಿಲ್ಲ. ಹೋರಾಟಗಾರರಾಗಿ ಅಂಡಮಾನ್ ಜೈಲಿನಲ್ಲಿ ಸೆರವಾಸ ಅನುಭವಿಸಿದ್ದರು. ಕೇವಲ ಒಂದು ಸಮುದಾಯದ ಮತಕ್ಕಾಗಿ ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಹಿರಿಯರಾಗಿದ್ದು, ಎಲ್ಲರಿಗೂ ಸೂಚನೆ ಕೊಡಬೇಕು. ಎಲ್ಲರೂ ಸಂಯಮದಿಂದ ಮಾತನಾಡಬೇಕು. ಚುನಾವಣಾ ವರ್ಷ ಆಗಿರುವುದರಿಂದ ಗಡಿ ದಾಟಿ ಹೋಗಿ ಮಾತನಾಡಲಾಗುತ್ತಿದೆ. ಒಂದು ಸಮುದಾಯದ ಕೇರಿಯಲ್ಲಿ ಸಾರ್ವಕರ್ ಫೋಟೋ ಏಕೆ ಹಾಕಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾರ್ವಕರ್ ಫೋಟೋ ತೆಗೆಸಿ ಅವರ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ರೀತಿಯಾದರೆ ದೇಶ ಏಕತೆ, ಸಮಗ್ರತೆಗೆ ಧಕ್ಕೆ ತರುವಂತಾಗುತ್ತದೆ. ಅದಕ್ಕೆ ಯಾರೂ ಕೂಡ ಅವಕಾಶ ಮಾಡಿಕೊಡಬಾರದು ಎಂದರು.