ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸಿದ್ದು ವಾಗ್ದಾಳಿ

Social Share

ಬೆಂಗಳೂರು, ಅ.19- ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿಯವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ನೀವು ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ನಾವು ಮಾಡುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸರಣಿ ಟ್ವೀಟ್ ಮೂಲಕ ಮುಖ್ಯಮಂತ್ರಿಯವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಅಕ್ರಮದ ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಕಳುಹಿಸಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ಸದ್ಯಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು, ರಾಹುಲ್ ಗಾಂಧಿ ಅವರಲ್ಲ ಎನ್ನುವುದು ನಿಮ್ಮ ನೆನಪಲ್ಲಿ ಇರಲಿ ಎಂದು ಲೇವಡಿ ಮಾಡಿದ್ದಾರೆ.

ಕೊಟ್ಟ ಕುದರೆ ಏರಲಿಕ್ಕಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಗಾದೆಯನ್ನು ಮತ್ತೆ ಮತ್ತೆ ನಿಜಮಾಡಲು ಹೊರಟಿರುವ ಮುಖ್ಯಮಂತ್ರಿಯವರೇ, ವಿರೋಧಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲಕಳೆಯುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆದುಕೊಳ್ಳಬೇಡಿ. ಅಕ್ರಮಗಳು ಯಾರ ಕಾಲದಲ್ಲಿ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದವನು ನಾನು. ಇದಕ್ಕಾಗಿಯೇ ಹೈಕೋರ್ಟ್ ಹಾಲಿ ನ್ಯಾಯಾೀಧಿಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿಂದೆ ಮಾಡಿರುವ ಒತ್ತಾಯವನ್ನು ಪುನರುಚ್ಚರಿಸುತ್ತೇನೆ ಎಂದಿದ್ದಾರೆ.

ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ.

ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ. ನಿಮ್ಮ ಧಮ್ ! ತಾಖತ್ ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್‍ಎಸ್‍ಎಸ್ ನಾಯಕರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು. ಸಾರ್ವಜನಿಕ ಸಭೆಗಳಲ್ಲಿ ವಿರೋಧ ಪಕ್ಷದ ವಿರುದ್ಧ ಅಬ್ಬರಿಸುತ್ತಿರುವ ನಿಮಗೆ, ನೀವು ಎರಡುವರೆ ಸಾವಿರ ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ಇಲ್ಲ. ಇದೆಂತಹ ನಿಮ್ಮ ಹೇಡಿತನ ಎಂದು ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ನಾಯಕರ ಬಗ್ಗೆ ರಾಹುಲ್ ಗಾಂಧಿಯವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ, ಐಟಿಗಳನ್ನು ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ್ ಗಾಂಧಿಯವರಿಗೆ ಕಳಿಸಿಬಿಡಿ ಪೇ ಸಿಎಂ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಅತ್ಯಾಚಾರ ಮತ್ತು ಕೊಲೆಗೀಡಾದ ಮಂಡ್ಯ ಜಿಲ್ಲೆ ಮಳವಳ್ಳಿಯ ಬಾಲಕಿಯ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇಂಥಾ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಪರಾಗೆ ಗರಿಷ್ಠ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಬೇಕು.

ಆಗ ಮಾತ್ರ ಅತ್ಯಾಚಾರದಂತ ರಾಕ್ಷಸಿ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.

Articles You Might Like

Share This Article