ಕೋಮುದ್ವೇಷ ನಾಗರಿಕ ಯುದ್ಧಕ್ಕೆ ದಾರಿ ಮಾಡಿಕೊಡುತ್ತೆ : ಸಿದ್ದರಾಮಯ್ಯ ಆತಂಕ

ಬೆಂಗಳೂರು, ಏ.10- ರಾಜ್ಯದಲ್ಲಿ ನಡೆಯುತ್ತಿರುವ ಕೋಮು ದ್ವೇಷದ ಗಲಭೆಗಳಿಂದ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು ನಾಗರಿಕ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಮುಖ್ಯಮಂತ್ರಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸರ್ಕಾರವನ್ನು ಸಂಘ ಪರಿವಾರಕ್ಕೆ ಹೊರಗುತ್ತಿಗೆ ನೀಡಿ, ಪುಂಡರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಂತೆ ಕಾಣುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸಂಘ ಪರಿವಾರಕ್ಕೆ ಸರ್ಕಾರವನ್ನೇ ಹೊರಗುತ್ತಿಗೆ (ಔಟ್ ಸೋರ್ಸ್) ಮಾಡಿ, ಅಲ್ಲಿನ ಪುಂಡರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಹಾಗೆ ಕಾಣುತ್ತಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಶಾಶ್ವತ ಕಳಂಕವಾಗಲಿ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಸಂಪುಟ ಇಲ್ಲವೇ ಪಕ್ಷದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸರ್ಕಾರವನ್ನು ಸಂಘಪರಿವಾರಕ್ಕೆ ಅಡವಿಟ್ಟರೆ ತಮ್ಮ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಕನಸು ಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿಯನ್ನೂ ಕಿತ್ತುಕೊಳ್ಳಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯನ್ನು ಧಿಕ್ಕರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮೊದಲಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದಷ್ಟು ಮುಖ್ಯಮಂತ್ರಿ ಬೊಮ್ಮಾಯಿಯವರು ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕಗಳಿಗಳಿಂದಾಗಿ ಹೊರರಾಜ್ಯ ಮತ್ತು ಹೊರದೇಶಗಳ ಎದುರು ಕೂಡುಬಾಳ್ವೆಗೆ ಹೆಸರಾದ ಶಾಂತಿ ಮತ್ತು ಸೌಹಾರ್ದ ಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ.

ಇದನ್ನು ಕನ್ನಡಿಗರು ಎಂದೂ ಕ್ಷಮಿಸರು. ಇದು ಮುಖ್ಯಮಂತ್ರಿಗಳೇ ಮಾಡಿರುವ ಪಾಪದ ಫಲ. ಬೀದಿಗೂಂಡಾಗಳ ಪುಂಡಾಟಿಕೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿಕೊಂಡ ನಂತರವೇ ಕೊಲೆ, ಹಿಂಸಾಚಾರ, ಗಲಾಟೆ, ದೌರ್ಜನ್ಯಗಳ ಹೊಸ ಸರಣಿ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇದರಿಂದ ಕಾನೂನು ವ್ಯವಸ್ಥೆಯೇ ಕುಸಿದುಬಿದ್ದು ನಾಗರಿಕ ಯುದ್ದಕ್ಕೆ ದಾರಿಮಾಡಿಕೊಟ್ಟಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘ ಪರಿವಾರದ ಜೊತೆಗಿನ ಸಹಯೋಗದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹರಡುತ್ತಿರುವ ಕೋಮುದ್ವೇಷದ ವಾತಾವರಣದಿಂದ ರಾಜ್ಯದ ಉದ್ಯಮಿಗಳು ಬೇಸತ್ತುಹೋಗಿ ಹೊರ ರಾಜ್ಯದ ಕಡೆ ಮುಖಮಾಡುತ್ತಿದ್ದಾರೆ. ಕಿರಣ್ ಮಜುಮದಾರ್ ಶಹಾ ಅವರಂತಹ ಖ್ಯಾತನಾಮರು ಕೂಡಾ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವುದ ಕಳವಳಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಮ್ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು, ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ.

ಭಾರತೀಯ ಜನತಾ ಪಕ್ಷ ಹೇಳಿಕೊಂಡು ಬರುತ್ತಿರುವ ರಾಮ ರಾಜ್ಯದ ಒಂದು ಚಿತ್ರವನ್ನು ರಾಮ ನವಮಿಯ ಹಿನ್ನೆಲೆಯಲ್ಲಿ ಧಾರವಾಡದ ಶ್ರೀರಾಮಸೇನೆಯ ಗೂಂಡಾಗಳು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ? ಎಂದು ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ನಡೆದ ಹಲ್ಲೆ ಕೇವಲ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆದದ್ದಲ್ಲ, ಅದು ಅವರು ಮಾರಾಟ ನಡೆಸುತ್ತಿದ್ದ ಕಲ್ಲಂಗಡಿ ಬೆಳೆಯುವ ರೈತರ ಮೇಲೆ ಕೂಡಾ ನಡೆದಿರುವ ದೌರ್ಜನ್ಯವಾಗಿದೆ. ಈ ಗೂಂಡಾಗಳನ್ನು ಹೀಗೆ ಸ್ವತಂತ್ರವಾಗಿ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ.

ರಾಜ್ಯ ಬೇಡದ ಕೂಸು, ಅಳುವ ಕೂಸುಗಳನ್ನು ನೋಡಿಯಾಗಿದೆ. ಈಗಿನದ್ದು ಆಡುವ ಗೊಂಬೆಯ ಸರ್ಕಾರ. ಆ ಕೂಸುಗಳಿಗೆ ಜೀವವಾದರೂ ಇತ್ತು, ಈಗಿನದ್ದು ಸಂಪೂರ್ಣ ನಿರ್ಜೀವ ಆಟದ ಗೊಂಬೆ. ಮುಖ್ಯಮಂತ್ರಿಗಳು ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಂತಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.