ಮೈಸೂರು, ಆ.26- ಕಮಿಷನ್ ದಂಧೆ, ಭ್ರಷ್ಟಚಾರ ಕಣ್ಣೆದುರಿಗೆ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಸರ್ಕಾರ ಪ್ರಾಮಾಣಿಕವಾಗಿದ್ದರೆ ತನಿಖೆ ನಡೆಸಲು ಹಿಂದೇಟು ಯಾಕೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ವರ್ಗಾವಣೆಯಲ್ಲೂ ಭ್ರಷ್ಟಚಾರ ನಡೆಯುತ್ತಿದೆ. ಎಸ್ಪಿಗಿಷ್ಟು, ಡಿವೈಎಸ್ಪಿಗಿಷ್ಟು ಅಂಥ ಹೋಟೆಲ್ ಮೆನೂ ಕಾರ್ಡ್ ಥರಾ ದರ ನಿಗದಿ ಮಾಡಿದ್ದಾರೆ. ನಾನು 12 ವರ್ಷ ಹಣಕಾಸು ಮಂತ್ರಿಯಾಗಿದ್ದ ಇಂಥ ಸರ್ಕಾರ ಎಂದು ನೋಡಿಲ್ಲ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.
ರಾಜ್ಯ ಗುತ್ತಿಗೆದಾರರ ಸಂಘ ಶೇ.40ರಷ್ಟು ಕಮಿಷನ್ ದಂಧೆಯ ಕುರಿತು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ತನಿಖೆ ನಡೆಸಲು ಮನವಿ ಮಾಡಿದ್ದರೂ ಪ್ರಧಾನಿ ಏನೂ ಕ್ರಮ ಕೈಗೊಂಡಿಲ್ಲ. ಕೆಂಪಣ್ಣ ಪತ್ರದ ಒಂದು ಪ್ರತಿಯನ್ನು ನನಗೂ ಕಳಿಸಿಕೊಟ್ಟಿದ್ದರು. ಮೊನ್ನೆ ಕೆಂಪಣ್ಣ ಮತ್ತು ಇತರರ ನನ್ನನ್ನ ಭೇಟಿ ಮಾಡಿ ಕಷ್ಟ ಹೇಳಿಕೊಂಡಿದ್ದಾರೆ.
ಶೇ.40ರಷ್ಟು ಕಮಿಷನ್, ಬಿಬಿಎಂಪಿಯಲ್ಲಿ ಶೇ.50ರಷ್ಟಾಗಿದೆ. ಎಲ್ಲಾ ಸಚಿವರು ಕಮಿಷನ್ ಹೊಡಿಯುತ್ತಿದ್ದಾರೆ. ಸಚಿವ ಮುನಿರತ್ನ ಅವರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಅವರು ಆರೋಪಕ್ಕೆ ದಾಖಲೆ ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದಿದ್ದು, ಇತಿಹಾಸದಲ್ಲೇ ಮೊದಲು. ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಸರ್ಕಾರ ತನಿಖೆ ಮಾಡಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಎಲ್ಲರೂ ಕಮಿಷನ್ ಪಡೆಯುತ್ತಿದ್ದಾರೆ ಎಂದ ಮೇಲೆ ದಾಖಲೆ ಎಲ್ಲಿಂದ ತರಲು ಸಾಧ್ಯ. ನಾ ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಂಡಿಲ್ಲ. ನಮ್ಮ ಅವಧಿಯದ್ದೂ ಸೇರಿ ತನಿಖೆ ಮಾಡಿಸಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಸಿಬಿಐನಿಂದಲೇ ತನಿಖೆ ಮಾಡಿಸಿ, ಜನರಿಗೆ ಸತ್ಯಾಂಶ ತಿಳಿಯಲಿ ಎಂದು ಆಗ್ರಹಿಸಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ, ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ನಾಲ್ಕು ವರ್ಷದಲ್ಲಿ ಬಿಜೆಪಿ ಭ್ರಷ್ಟಾಚಾರ ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ಏನನ್ನು ಮಾಡಿಲ್ಲ. ಅವರ ಅವಧಿ ಮುಗಿಯುತ್ತಾ ಬಂದರೂ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ನಾನು ಮುಖ್ಯಮಂತ್ರಿ ಯಾಗಿದ್ದಾಗ 15 ಲಕ್ಷ ಮನೆಗಳು ನಿರ್ಮಾಣವಾಗಿತ್ತು. ಇವರ ಕಾಲದಲ್ಲಿ ಎಷ್ಟು ಮನೆಗಳ ಕಟ್ಟಿಸಲಾಗಿದೆ ಎಂದರೆ ಉತ್ತರ ಇಲ್ಲ. ಕೋವಿಡ್ ಸಮಯದಲ್ಲಿ ಮಾಸ್ಕ್, ವೆಂಟಿಲೇಟರ್, ಔಷಧಿ ಖರೀದಿಯಲ್ಲೂ ಭ್ರಷ್ಟಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದ ಮೇಲೆ 2 ಲಕ್ಷದ 42 ಸಾವಿರ ಕೋಟಿ ಸಾಲ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ 5 ಲಕ್ಷದ 40 ಸಾವಿರ ಕೋಟಿ ಸಾಲ ಮಾಡಿದೆ. ಈ ಸರ್ಕಾರಕ್ಕೆ ಬಡವರ ಮೇಲೆ ಪ್ರೀತಿ ಇಲ್ಲ. ಆಡಳಿತ ವ್ಯವಸ್ಥೆ ಸತ್ತಿದೆ. ಸಚಿವ ಮಾಧುಸ್ವಾಮಿಯವರೇ ಅದನ್ನು ಹೇಳಿದ್ದಾರೆ. ಧರ್ಮ, ಜಾತಿ ಹೆಸರಲ್ಲಿ ಕೋಮು ಸಂಘರ್ಷ ಮಾಡುವುದು.
ಮಾಂಸ ಆಹಾರದಂತಹ ವಿಷಯಗಳಲ್ಲಿ ಜನರ ಮನಸ್ಸನ್ನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಸಚಿವರಾಗಿದ್ದ ಈಶ್ವರಪ್ಪನ ವಿರುದ್ಧ ಆರೋಪ ಮಾಡಿ ಸಂಪತ್ತು ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು. ಆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಜಾರಿಗೊಳಿಸಿದ್ದ ಹಲವು ಕಾರ್ಯಕ್ರಮಗಳನ್ನು ಈ ಸರ್ಕಾರ ನಿಲ್ಲಿಸಿದೆ. ಕೇಂದ್ರ ಒಪ್ಪಿದರೆ ಬಡವರ ಅಕ್ಕಿ ನಿಲ್ಲಿಸುವುದಾಗಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಬಡವರಿಗೆ ಅಕ್ಕಿ ನೀಡಲು ಸರ್ಕಾರದ ಬಳಿ ಹಣ ಇಲ್ಲದಿರಬಹುದು ಅಥವಾ ಸರ್ಕಾರ ಬಡವರ ವಿರೋಧಿ ನಿಲುವು ಹೊಂದಿರಬಹುದು ಎಂದು ಕಾರಣಗಳನ್ನು ವಿಶ್ಲೇಷಿಸಬಹುದು ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಇದು ಜನರ ಆಶೀರ್ವಾದ ಪಡೆದು ಬಂದ ಸರ್ಕಾರವಲ್ಲ ಇದು ಚುನಾಯಿತ ಸರ್ಕಾರವಲ್ಲ. ಅನೈತಿವಾಗಿ ರಚನೆಯಾದ ಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದಿದ್ದರು. ಪರ್ಸಂಟೇಜ್ ಆಫ್ ಓಟ್ ನೋಡಿದರೆ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿದೆ. ಕಡಿಮೆ ಸ್ಥಾನಗಳನ್ನು ಗೆದಿದ್ದೇವೆ ಎಂದರು.