ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಸಿದ್ದರಾಮಯ್ಯ

Social Share

ಬಾಗಲಕೋಟೆ,ಜ.18- ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಚುನಾವಣೆ ಸ್ಪರ್ಧೆ ಕುರಿತು ಮತ್ತೆ ಚರ್ಚೆ ಶುರುವಾಗಿದೆ. ಮುಂದಿನ ಚುನಾವಣೆ ಯಲ್ಲಿ ಒಂದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ ಎಂದು ಪಕ್ಷ ಖಚಿತ ಪಡಿಸಿದೆ.


ಬಾಗಲಕೋಟೆಯಲ್ಲಿಂದು ಮಾತನಾಡಿದ ಸಿದ್ದರಾಮಯ್ಯ ಅವರು, ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಇದೇ ವೇಳೆ ಬಾಗಲಕೋಟೆಯಲ್ಲಿಯೇ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ನೇರವಾಗಿ ಒಂದೇ ಕಡೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಒಂದೇ ಕಡೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿ ಮುಂಚೂಣಿ ಯಲ್ಲಿರುವ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಇತ್ತೀಚಿನವರೆಗೂ ಗೊಂದಲವಿತ್ತು.

ಕಾಂಗ್ರೆಸ್ ಕೊಡುಗೆಗಳಿಗೆ ಟಕ್ಕರ್ ಕೊಡಲು ಕಮಲ ಪ್ರಣಾಳಿಕೆ ತಯಾರಿ

ಕಳೆದ ವಾರ ಅದು ಇತ್ಯರ್ಥಗೊಂಡಿದ್ದು, ಕೋಲಾರದಿಂದ ಕಣಕ್ಕಿಳಿಯುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ನಡೆವೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದರು. ಅದಕ್ಕೆ ಇಂದು ಇಬ್ಬರು ಪ್ರಮುಖ ನಾಯಕರು ಸ್ಪಷ್ಟನೆ ನೀಡಿದ್ದಾರೆ.ಬಾಗಲಕೋಟೆಯಲ್ಲಿ ಮುಂದುವರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಾಸಕರಾದವರಿಗೆ ಬೇಕಾದಷ್ಟು ಕೆಲಸಗಳನ್ನು ಮಾಡಬೇಕು ಅನಿಸುತ್ತೆ, ಎಲ್ಲವನ್ನು ಮಾಡಲಾಗಲ್ಲ. ನಾನು ವಿರೋಧ ಪಕ್ಷದಲ್ಲಿದ್ದುಕೊಂಡು ಎಷ್ಟು ಮಾಡಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಕಳೆದ ಬಾರಿ ಸ್ರ್ಪಸಿದ್ದ ಬಾದಾಮಿಯಲ್ಲಿ ಗರಿಷ್ಠ ಪ್ರಮಾಣದ ಕೆಲಸ ಮಾಡಿದ್ದೇನೆ ಎಂದರು.

ಸಿದ್ದರಾಮಯ್ಯ ಅಲೆಮಾರಿ ರೀತಿ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಕೆಲವರು ಮಾತನಾಡುತ್ತಾರೆ. ಎಂಟು ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತಿದ್ದೇನೆ. ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ನನ್ನ ಹುಟ್ಟೂರನ್ನು ಒಳಗೊಂಡು ವರುಣಾ ಕ್ಷೇತ್ರವಾಗಿ ಬದಲಾಗಿತ್ತು. ಹಾಗಾಗಿ ಎರಡು ಬಾರಿ ವರುಣಾದಲ್ಲಿ ಸ್ರ್ಪಸಿದ್ದೆ. ನಂತರ ಕಳೆದ ಚುನಾವಣೆಯಲ್ಲಿ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ, ಜನ ಸೋಲಿಸಿ ಬಿಟ್ಟರು. ನಾನು ಅಲೆಮಾರಿಯಲ್ಲ ಎಂದರು.

ಬಾದಾಮಿ ದೂರ ಇದೆ, ಜನರಿಗೆ ಪ್ರತಿದಿನ ಸಿಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹತ್ತಿರ ಇರುವ ಕೋಲಾರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಅದು ಹೈಕಮಾಂಡ್ ಒಪ್ಪಿದ್ದರೆ ಮಾತ್ರ. ಒಂದೇ ಕ್ಷೇತ್ರದಲ್ಲಿ ನಿಂತವರು ಮಾತ್ರ ನಾಯಕ, ಎರಡು ಕಡೆ ನಿಂತವರು ನಾಯಕರಲ್ಲವಾ ? ಹಾಗಿದ್ದರೆ ನರೇಂದ್ರ ಮೋದಿ ಎರಡು ಕಡೆ ಸ್ಪರ್ಧೆ ಮಾಡಲಿಲ್ಲವಾ, ಅವರು ನಿಂತರೆ ಮಾತ್ರ ಜನಪ್ರಿಯ ವ್ಯಕ್ತಿ, ಸಿದ್ದರಾಮಯ್ಯ ನಿಂತರೆ ಜನಪ್ರಿಯವಲ್ಲದ ನಾಯಕ ಎಂಬ ಪೂರ್ವಾಗ್ರಹ ಏಕೆ. ಇದನ್ನು ಬೀಡಬೇಕು. ಜನ ಪ್ರೀತಿ ಇದ್ದರೆ ಮಾತ್ರ ಅಲ್ಲವೇ ಗೆಲ್ಲಲು ಸಾಧ್ಯ ಅಲ್ಲವೇ. ಎಂಎಲ್ಎ ಸ್ಥಾನವನ್ನು ಸುಮ್ಮನೆ ತೆಗೆದುಕೊಂಡು ಹೋಗಿ ಎಂದು ಯಾರಾದರೂ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಬಾದಾಮಿಯಲ್ಲಿ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿ ಸ್ಪರ್ಧೆ ಮಾಡುತ್ತಿದ್ದರು. ನಾನು ಅಲ್ಲಿ ಸ್ಪರ್ಧೆ ಮಾಡಿದಾಗ ಬಿಜೆಪಿಯವರು ಶ್ರೀರಾಮುಲುರನ್ನು ಕರೆ ತಂದು ನಿಲ್ಲಿಸಿದರು. ಯಾಕೆ ? ನನ್ನನ್ನು ಸೋಲಿಸಬೇಕು ಎಂದಲ್ಲವೇ, ಖುದ್ದು ಅಮಿತಾ ಶಾರೇ ನಾಮಪತ್ರ ಸಲ್ಲಿಸುವ ವೇಳೆ ಬಂದಿದ್ದರು. ಶ್ರೀರಾಮಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರೂ ಬಾದಾಮಿಯಲ್ಲಿ ನನ್ನ ವಿರುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸಿದರು.
1991ರಲ್ಲಿ ಕೊಪ್ಪಳ ಲೋಕಸಭೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. 10 ಸಾವಿರ ಮತಗಳಿಂದ ಸೋಲು ಕಂಡಿದ್ದೆ. ಆ ವೇಳೆ ರಾಜೀವ್ಗಾಂ ಹತ್ಯೆಯಾಗಿತ್ತು. ಇಲ್ಲವಾಗಿದ್ದರೆ ನಾನು ಗೆಲ್ಲುತ್ತಿದ್ದೆ. ಅತಿ ಕಡಿಮೆ ಮತಗಳಿಂದ ಸೋಲು ಕಂಡಿದ್ದು ನಾನು ಮಾತ್ರ. ಕೆಲವರು ಅನಗತ್ಯವಾಗಿ ನನ್ನ ಕ್ಷೇತ್ರ ಆಯ್ಕೆ ಬಗ್ಗೆ ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ಪ್ರೀತಿ ಮುಖ್ಯ ಎಂದರು.

ಕೆಲವರು ಮಾತ್ರ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಹಾಗಾಗಿ ಅಭಿಪ್ರಾಯ ವ್ಯಕ್ತ ಪಡಿಸುವರಿಗೆ ನಾನೇಕೆ ಅಡ್ಡಿ ಪಡಿಸಲಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಮಾತ್ರ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅಧಿಕಾರ ನನಗಿದೆ ಎಂದರು.ನನ್ನ ವಿಷಯದಲ್ಲಿ ಟಿಆರ್ಪಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಕೆಲವರು ಪ್ರಚಾರ ಮಾಡುತ್ತಾರೆ. ಮಾಧ್ಯಮಗಳಲ್ಲಿನ ವರದಿಗಾರರ ಬಗ್ಗೆ ನನಗೆ ಆಕ್ಷೇಪವಿಲ್ಲ. ಕೆಲವು ಸಂಪಾದಕರು ನನ್ನ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.

ಅರುಣ್ಸಿಂಗ್ರಿಗೆ ಸೂಟ್ಕೇಸ್ ತಲುಪುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರ ನೇರವಾಗಿ ಕಾಣುತ್ತಿದೆ. ಬಿಜೆಪಿ ಶಾಸಕ ಯತ್ನಾಳ್ ನೇರ ಆರೋಪ ಮಾಡಿ ಯಡಿಯೂರಪ್ಪನ ಮನೆಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ ಎಂದಿದ್ದಾರೆ. ಯಡಿಯೂರಪ್ಪನ ಮಗ ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಮಾಡಿದ್ದಾರೆ. ಯತ್ನಾಳ್ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿಯಲ್ಲಿ ಇರುವ ಕೆಲವರು ಯಡಿಯೂರಪ್ಪನ ವಿರುದ್ಧ ಯತ್ನಾಳ್ರನ್ನು ಎತ್ತಿಕಟ್ಟುತ್ತಿದ್ದಾರೆ. ಒಂದು ವೇಳೆ ಕ್ರಮ ಕೈಗೊಂಡರೆ ಯತ್ನಾಳ್ ನಮ್ಮ ಮತ್ತಷ್ಟು ಹಗರಣಗಳನ್ನು ಬಯಲು ಮಾಡಬಹುದು ಎಂಬ ಭಯ ಬಿಜೆಪಿಗರನ್ನು ಕಾಡುತ್ತಿದೆ. ತಮ್ಮದು ಶಿಸ್ತಿನ ಪಕ್ಷ ಎನ್ನುತ್ತಾರಲ್ಲ, ಇದೇನಾ ಶಿಸ್ತು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.


ನಾನು ಒಳಮೀಸಲಾತಿ ಪರವಾಗಿದ್ದೇನೆ, ಸದಾಶಿವ ಆಯೋಗದ ವರದಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ನಿರ್ಣಯ ಮಾಡಿದೆ. ನಾವೇಲ್ಲಾ ಅದಕ್ಕೆ ಬದ್ಧವಾಗಿದ್ದೇವೆ. ನನ್ನನ್ನು ಸೇರಿದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಆ ನಿರ್ಣಯಕ್ಕೆ ಬದ್ಧ ಎಂದರು.ನನ್ನ ಬಳಿ ಲಂಬಾಣಿ ಸಮುದಾಯದ ಕೆಲವರು ಬಂದಿದ್ದರು, ಅವರ ಜೊತೆ ಮಾತನಾಡುವಾಗ ನಮ್ಮ ಸರ್ಕಾರ ಬಂದಾಗ ನಿಮ್ಮನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ನಾನು ಸ್ನೇಹಿತರು. ನಾವೇಲ್ಲಾ ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಕನಿಷ್ಠ 130 ಸ್ಥಾನ ಗಳಿಸುತ್ತೇವೆ, ಗರಿಷ್ಠ 150 ಸ್ಥಾನಗಳವರೆಗು ಗೆಲ್ಲುತ್ತೇವೆ. ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೆ ಖಚಿತವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಂತರ ಮುಖ್ಯಮಂತ್ರಿಯನ್ನು ಹೈಕಮಾಂಡ್ ಮತ್ತು ಪಕ್ಷದ ಶಾಸಕರು ನಿರ್ಧರಿಸುತ್ತಾರೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಅವರನ್ನು ನಾವೇಕೆ ಬರಬೇಡಿ ಎಂದು ಹೇಳಲಿ, ರಾಜಕೀಯಕ್ಕಾಗಿ ಬರುತ್ತಿದ್ದಾರೆ ಬರಲಿ ಬಿಡಿ ಎಂದರು.
ನಾ ನಾಯಕಿ ಕಾರ್ಯಕ್ರಮದಲ್ಲಿ ತಮ್ಮ ನೋಟದ ಬಗ್ಗೆ ಟ್ರೋಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಪ್ರಸ್ತುತ ವಿಷಯಗಳ ಬಗ್ಗೆ ಚರ್ಚೆ ಮಾಡಬಾರದು. ಸಮಾಜಕ್ಕೆ ಪೂರಕವಾದ ವಿಷಯಗಳ ಕುರಿತು ಮಾತ್ರ ಚರ್ಚೆ ಮಾಡಬೇಕು ಎಂದರು. ಶೀಘ್ರವೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಚುನಾವನೆ ಘೋಷಣೆಗೂ ಮೊದಲೇ ಕಾಂಗ್ರೆಸ್ ಅಭ್ಯಥಿಗಳನ್ನು ಪ್ರಕಟಿಸಲಾಗುವುದು ಎಂದರು.

#Siddaramaiah, #AssemblyElection2023, #Congress,

Articles You Might Like

Share This Article