ಭಾರೀ ಚರ್ಚೆಯಾಗುತ್ತಿದೆ ಸಿದ್ದು-ಡಿಕೆಶಿ ಆಲಿಂಗನ

Social Share

ಬೆಂಗಳೂರು,ಆ.4- ನಿನ್ನೆ ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಲಿಂಗನ ಮಾಡಿಕೊಂಡಿದ್ದು ರಾಜಕೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಚರ್ಚೆಗಳು ಕೇಳಿಬರುತ್ತಿರುವುದರ ಮಧ್ಯೆ ಇದಕ್ಕೆ ಸಂಬಂಧಪಟ್ಟ ಫೋಟೋ, ವಿಡಿಯೊ ಹರಿದಾಡುತ್ತಿವೆ. ಆದರೆ, ಇದರಲ್ಲಿ ಬಿಜೆಪಿ ಬಹುದೊಡ್ಡ ಲೋಪವನ್ನು ಹುಡುಕಿದ್ದು, ಇದೇ ವಿಡಿಯೊವನ್ನಿಟ್ಟುಕೊಂಡು ಲೇವಡಿ ಮಾಡುತ್ತಿದೆ.

ಸಿದ್ದರಾಮಯ್ಯ-ಡಿಕೆಶಿಯದ್ದು ತೋರಿಕೆಯ ನಾಟಕ. ಒಗ್ಗಟ್ಟು, ಅಣತಿಯ ಅಪ್ಪುಗೆಯಷ್ಟೆ, ಇದು ಎಷ್ಟು ದಿನ ನೋಡಬೇಕಿದೆ ಎಂದು ಬಿಜೆಪಿ ನಾಯಕರು ಅಣಕಿಸುತ್ತಿದ್ದಾರೆ. ಇದಕ್ಕೆ ಕಾರಣ ಕಾರ್ಯಕ್ರಮ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಭಾಷಣ ಮಾಡಿ ಸಿದ್ದರಾಮಯ್ಯನವರಿಗೆ ಶಾಲು ಹೊದಿಸಿ, ಇಂದಿರಾ ಗಾಂಧಿಯವರ ಪುಸ್ತಕ ಕೊಟ್ಟ ನಂತರ ಕೈಯೆತ್ತಿ ಪ್ರೇಕ್ಷಕರೆದುರು ಕೈಬೀಸಿದರು. ಸಿದ್ದರಾಮಯ್ಯನವರು ಕೂಡ ನಗುತ್ತಾ ಕೈಬೀಸಿದರು.

ಆದರೆ ಅಷ್ಟಕ್ಕೇ ಮುಗಿಯಲಿಲ್ಲ. ಪಕ್ಕದಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಕೈ ಸನ್ನೆ ಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಆಗ ಡಿ.ಕೆ.ಶಿವಕುಮಾರ್ ಅವರಿಗೆ ಇಚ್ಛೆಯಿತ್ತೋ, ಇಲ್ಲವೋ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಂಡರು. ಇದನ್ನೇ ಹಿಡಿದುಕೊಂಡು ಬಿಜೆಪಿ ಟ್ವೀಟ್ ಮಾಡಿ ಅಣಕಿಸಿದೆ.

ಒಗ್ಗಟ್ಟು ಎಷ್ಟು ದಿನ ಇರುತ್ತದೋ ನೋಡೋಣ: ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಒಗ್ಗಟ್ಟು ಎಷ್ಟು ದಿನ ಇರುತ್ತದೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ಇವತ್ತು ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇವರು ಪರಮೇಶ್ವರ್ ಅವರನ್ನು ಸೋಲಿಸಿದರು. ಈ ಒಗ್ಗಟ್ಟು ಎಷ್ಟು ದಿನ ಇರುತ್ತೇ ನೋಡೋಣ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಮಳೆಯಿಂದ 13 ಜನ ಮೃತಪಟ್ಟಿದ್ದಾರೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ನಡೆಸಿದ್ದು ಎಷ್ಟು ಸರಿ ? ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಂಡಿದೆಯೇ ? ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು ಬಂದಿದ್ದಾರೆ ? ಸಂಕಷ್ಟದಲ್ಲಿದ್ದಾಗ ಹಾಡಿ ಹೊಗಳೋದು ಮಾನವೀಯತೆ ಇರುವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

Articles You Might Like

Share This Article