ಬೆಂಗಳೂರು, ಫೆ.6- ದೇಶ ಕಂಡ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಲತಾ ಮಂಗೇಶ್ಕರ್ ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಮತ್ತೆ ಆರೋಗ್ಯ ಹದಗೆಟ್ಟು ವೆಂಟಿಲೇಟರ್‍ನಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದಿದ್ದಾರೆ.
ಚಿಕ್ಕವಯಸ್ಸಿನಲ್ಲೇ ಹಾಡಲು ಆರಂಭಿಸಿದ ಲತಾ ಮಂಗೇಶ್ಕರ್ 30 ಸಾವಿರ ಹಾಡುಗಳನ್ನು ಹಾಡುವ ಮೂಲಕ ಚಿತ್ರರಂಗದಲ್ಲಿ ದೊಡ್ಡ ಛಾಪು ಮೂಡಿಸಿದರು. ಪದ್ಮ ಭೂಷಣ, ಪದ್ಮ ವಿಭೂಷಣ, ಪಾಲ್ಕೆ, ಭಾರತರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ಅಗಲುವಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ವಿಷಾದಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು, ಭಾರತದ ಗಾನ ಕೋಗಿಲೆ ಎಂದೇ ಪ್ರಖ್ಯಾತಿ ಪಡೆದಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನಾವು ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದಿದ್ದೇವೆ ಎಂದು ಶೋಕಿಸಿದ್ದಾರೆ.
ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ ಸೇರಿದಂತೆ ಹಲವು ಸುಮಧುರ ಹಿಂದಿ ಹಾಡುಗಳು ಸದಾ ನಮ್ಮ ಕಿವಿಯಲ್ಲಿವೆ. 1967ರಲ್ಲಿ ಬಿಡುಗಡೆಯಾದ ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು, ಎಲ್ಲಾರೆ ಇರತೀರೋ ಎಂದಾರೆ ಬರತೀರೋ ಹಾಡನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ.
ಅವರ ಕಲಾ ಸೇವೆಗೆ ದೇಶದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಭಾರತ ರತ್ನ ಸೇರಿದಂತೆ ಪದ್ಮ ಪ್ರಶಸ್ತಿಗಳು, ದಾದಾ ಸಾಹೇಬ್ ಪಾಲ್ಕೆ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರ ಮುಕುಟ ಅಲಂಕರಿಸಿವೆ. ಇಂದು ದೇಶದ ಕಲಾರತ್ನವೊಂದು ನಮ್ಮಿಂದ ಕಣ್ಮರೆಯಾಗಿದ್ದು, ಹಾಡುಗಳ ಮೂಲಕ ಅವರು ಸದಾ ಜೀವಂತವಾಗಿರಲಿದ್ದಾರೆ. ಅವರ ಅಗಲಿಕೆ ದೇಶದ ಕಲಾಕ್ಷೇತ್ರಕ್ಕೇ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
