ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ರಹಸ್ಯ ಸಮಾಲೋಚನೆ

Social Share

ಬೆಂಗಳೂರು,ನ.26- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಮತದಾರರ ಪಟ್ಟಿ ಅಕ್ರಮ, ಬಿಬಿಎಂಪಿ ಚುನಾವಣೆ ತಯಾರಿ, ಮುಂದಿನ ವಿಧಾನಸಭೆಯ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವಾರು ವಿಚಾರಗಳು ಈ ವೇಳೆ ಚರ್ಚೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ನಿನ್ನೆ ಬೆಂಗಳೂರಿನ ಹೊರವಲಯದಲ್ಲಿ ಕರೆಯಲಾಗಿತ್ತು. ಆದರೆ ಮಾಜಿ ಶಾಸಕ ಶ್ರೀಶೈಲಪ್ಪ ಬಿರದೂರು ಅವರ ಅಕಾಲಿಕ ನಿಧನದಿಂದಾಗಿ ಸಭೆ ಮುಂದೂಡಿಕೆಯಾಗಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲೇ ಇದ್ದರೂ ಈ ಸಭೆಗೆ ಭಾಗವಹಿಸಿರಲಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಿದ್ದರಾಮಯ್ಯ ಭಿನ್ನ ನಿಲುವು ಹೊಂದಿದ್ದಾರೆ ಎಂಬ ಸಂದೇಶ ರವಾನಿಸಿತು.

ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ

ಪಕ್ಷದಲ್ಲಿ ಆರಂಭದಿಂದಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭಿನ್ನಮತಗಳಿವೆ, ಭಿನ್ನ ಗುಂಪುಗಳಿವೆ ಎಂಬ ವದಂತಿಗಳಿವೆ. ಇದಕ್ಕೆ ತಾರ್ಕಿಕ ತೆರೆ ಎಳೆಯಲು ಸಾಧ್ಯವಾಗಿಲ್ಲ. ಅದರ ಜೊತೆಗೆ ಅಲ್ಲಲ್ಲಿ ಕೆಲವು ಗೊಂದಲಕಾರಿ ನಡೆಗಳು, ಹೇಳಿಕೆಗಳು ವ್ಯಕ್ತವಾಗುತ್ತಲೇ ಇದೆ. ಇದು ಅಭ್ಯರ್ಥಿಗಳ ಆಯ್ಕೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಐದು ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದರು. ಇದರಲ್ಲಿ ಸಿದ್ದರಾಮಯ್ಯ ಅವರ ಬಣಕ್ಕೆ ಅವಕಾಶ ಕಡಿಮೆ ಸಿಕ್ಕಿದೆ ಎಂಬ ಆಕ್ಷೇಪಗಳಿವೆ.

ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳ ಅಧ್ಯಕ್ಷರ ನೇಮಕಾತಿಯಾಗುವ ಸಾಧ್ಯತೆ ಇದೆ. ಡಿ.ಕೆ.ಶಿವಕುಮಾರ್ ಪ್ರತಿ ಹಂತದಲ್ಲೂ ತಮ್ಮ ಹಿಡಿತವನ್ನು ಬಿಗಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನಮಾನಸದಲ್ಲಿ ಸಿದ್ದರಾಮಯ್ಯ ಅವರು ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಅಷ್ಟು ಸುಲಭವಾಗಿ ಮೂಲೆಗುಂಪಾಗಲು ಸಾಧ್ಯವಿಲ್ಲ. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ಪ್ರತಿರೋಧವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ನಿನ್ನೆ ಸಭೆಗೆ ಗೈರು ಹಾಜರಾಗಿರುವುದು ಪ್ರತಿಭಟನೆಯ ಸಂಕೇತ ಎಂದು ಹೇಳಲಾಗಿದೆ.

ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಸ್ಥಳೀಯ ಗೊಂದಲಗಳನ್ನ ಆರಂಭದಲ್ಲಿಯೇ ಬಗೆಹರಿಸಿಕೊಳ್ಳುವಂತೆ ಕಟ್ಟಪ್ಪಣೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಮಹಿಳೆ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಭಾರತಿಯನ ಬಂಧನ

ಈ ನಿಟ್ಟಿನಲ್ಲಿ ಇಂದು ಉಭಯ ನಾಯಕರು ರಹಸ್ಯ ಸಭೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ತಮ್ಮಲ್ಲಿನ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಂಡು ಒಮ್ಮತದಿಂದ ಮುಂದಡಿ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

siddaramaiah, dk shivakumar, secret, meeting, congress,

Articles You Might Like

Share This Article