‘ಸಿದ್ದರಾಮಯ್ಯನವರಿಂದ ಕಾಂಗ್ರೆಸ್‍ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು’ : ಹೈಕಮಾಂಡ್‍ಗೆ ದೂರು

Spread the love

ಬೆಂಗಳೂರು, ಜ.1- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಕಾಂಗ್ರೆಸ್‍ಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಹನುಮ ಜಯಂತಿಯ ದಿನದಂದು ಮಾಂಸಾಹಾರ ಸೇವಿಸುವ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅನಿಸಿದ್ದನ್ನು ಹೇಳಲು ಹೆದರಬಾರದು. ನಾನು ದನದ ಮಾಂಸ ತಿನ್ನಲು ಇಚ್ಚಿಸಿದರೆ ಅದನ್ನು ಬೇಡ ಎನ್ನಲು ನಿವ್ಯಾರು ಎಂದು ತಾವು ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇದಕ್ಕೂ ಮೊದಲು ರಾಜ್ಯ ಸರ್ಕಾರ ತರಲು ಹೊರಟ್ಟಿರುವ ಬಲವಂತದ ಮತಾಂತರ ನಿಷೇಧ ಕಾಯ್ದೆ(ಲವ್ ಜಿಹಾದ್)ಯನ್ನು ವಿರೋಧಿಸುವ ಭರದಲ್ಲಿ ಹಿಂದು ಮುಸ್ಲಿಮರ ನಡುವೆ ಸಾಕಷ್ಟು ಮದುವೆಗಳಾಗಿವೆ. ಬಹಳಷ್ಟು ಮಂದಿ ಕ್ರಾಸ್ ಆಗಿ ಹುಟ್ಟಿದ್ದಾರೆ. ಈಗ ಕಾನೂನು ತರುವುದರಿಂದ ಏನು ಪ್ರಯೋಜನ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿವೆ. ಅಲ್ಪಸಂಖ್ಯಾತರನ್ನು ಒಲೈಸುವ ಸಲುವಾಗಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದಾರೆ. ಆದರೆ ಅದರಲ್ಲಿನ ಭಾವನಾತ್ಮಕ ಅಂಶಗಳು ಬಹುಸಂಖ್ಯಾತ ಹಿಂದು ಸಮುದಾಯದ ಅಸಮಾದಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಕಾಂಗ್ರೆಸ್‍ನ ವರ್ಚಸ್ಸನ್ನು ಹಾಳು ಮಾಡಿದೆ ಎಂದು ಹಿರಿಯ ನಾಯಕರು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಇತ್ತೀಚೆಗೆ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ವಿರುದ್ಧ ಮಾತನಾಡಲು ಯಾರು ಹೆದರಬಾರದು. ನಿಮಗೆಲ್ಲಾ ಭಯ ಇದ್ದರೆ ಹೇಳಿ ಬಿಡಿ. ನಾನೇ ಮಾತನಾಡುತ್ತೇನೆ ಎಂದಿದ್ದರು. ಆದರೆ ಅವರು ಆಡುತ್ತಿರುವ ಮಾತುಗಳು ಬಿಜೆಪಿಗೆ ಹಾನಿ ಮಾಡುವ ಬದಲಿಗೆ ಮತ ಬ್ಯಾಂಕ್‍ನ್ನು ಗಟ್ಟಿ ಮಾಡಿಕೊಡುತ್ತಿವೆ. ಬಹುಸಂಖ್ಯಾತ ಹಿಂದುಗಳು ಕಾಂಗ್ರೆಸ್ ವಿರುದ್ಧ ಸಿಟ್ಟಿಗೇಳಲು ಅವಕಾಶ ಮಾಡಿಕೊಡುತ್ತಿವೆ.

ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರಗತಿಪರ ವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಆದರೆ ಅದರಿಂದ ಕಾಂಗ್ರೆಸ್‍ಗೆ ಯಾವುದೇ ಲಾಭವಾಗುವುದಿಲ್ಲ. ಪ್ರಗತಿಪರ ವಲಯದಲ್ಲಿರುವವರ ಸಂಖ್ಯೆ ಬಹಳ ಕಡಿಮೆ, ಇದ್ದರೂ ಅವರು ಚುನಾವಣೆ ಕಾಲಕ್ಕೆ ಎಡಪಕ್ಷಗಳು ಸೇರಿದಂತೆ ಬೇರೆ ರಾಜಕೀಯ ಶಕ್ತಿಯತ್ತ ವಾಲುತ್ತಾರೆ. ಕಾಂಗ್ರೆಸ್‍ಗೆ ಸತತ ಸೋಲಾಗಲು ಈ ರೀತಿಯ ನಡವಳಿಕೆಗಳು ಕಾರಣವಾಗುತ್ತಿವೆ. ಕೆಲವೇ ಕೇಲವು ಪ್ರಗತಿಪರರ ಮೆಚ್ಚುಗೆ ಗಳಿಸಲು ಮಾತನಾಡಿದರೆ ರಾಜಕೀಯವಾಗಿ ಕಾಂಗ್ರೆಸ್ ಮತ್ತಷ್ಟು ನೆಲ ಕಚ್ಚಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗೋಹತ್ಯೆ ನಿಷೇಧ, ಲವ್ ಜಿಹಾದ್ ಸೇರಿದಂತೆ ಬಹಳಷ್ಟು ಕಾನೂನುಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ನಿಜ. ಅದೇ ಸಮಯಕ್ಕೆ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವ ನೀತಿಯನ್ನು ಅನುಸರಿಸಬೇಕಿದೆ. ಧಾರ್ಮಿಕ ನಂಬಿಕೆಯ ಸೂಕ್ಷ್ಮ ವಿಷಯ ಬಂದಾಗ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ. ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ವಿರುದ್ಧವಾಗಿ ಯಾರೇ ಮಾತನಾಡಿದರೂ ಅದು ಕಾಂಗ್ರೆಸ್‍ಗೆ ಹಾನಿಯಾಗಲಿದೆ ಎಂದು ಹಿರಿಯ ನಾಯಕರು ಹೈಕಮಾಂಡ್ ಮುಂಖಡರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದು, ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಗೊಂದಲಕಾರಿ ನಿಲುವುಗಳಿಂದ ಹಿಗಾಗಲೇ ಬಹುತೇಕ ಸಮುದಾಯಗಳನ್ನು ದೂರ ಮಾಡಿಕೊಂಡಿದೆ. ಅಲ್ಪಸಂಖ್ಯಾತರು ಮೊದಲಿನಿಂತೆ ಕಾಂಗ್ರೆಸ್ ಜೊತೆಗೆ ನಿಲ್ಲುತ್ತಿಲ್ಲ. ಒಂದು ವೇಳೆ ಅಲ್ಪಸಂಖ್ಯಾತರು, ದಲಿತರು ಕಾಂಗ್ರೆಸ್‍ನೊಂದಿಗೆ ನಿಂತಿದ್ದರೆ ಎಲ್ಲಾ ಚುನಾವಣೆಗಳಲ್ಲೂ ಗೆದ್ದು ಅಧಿಕಾರ ಹಿಡಿಯಬೇಕಿತ್ತು.

ಇತ್ತೀಚಿನ ದಿನಗಳಲ್ಲಿ ಎಐಎಂಐಎಂ, ಎಸ್‍ಡಿಪಿಐ ಸೇರಿದಂತೆ ಅನೇಕ ಪಕ್ಷಗಳಿಗೆ ಅಲ್ಪಸಂಖ್ಯಾತರ ಮತಗಳು ಹರಿದು ಹಂಚಿ ಹೋಗುತ್ತಿವೆ. ಈಗಲೂ ಅಲ್ಪಸಂಖ್ಯಾತರನ್ನು ಒಲೈಸುತ್ತಲೇ ಕುಳಿತರೆ, ಕೋಮುವಾದಿ ಬಿಜೆಪಿ ಗೆಲುವಿಗೆ ನಾವೇ ಸಹಕಾರ ನೀಡಿದಂತಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹೊಸ ತಂತ್ರಗಾರಿಕೆ ರೂಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಉಳಿದಿರುವ ಅಲ್ಪಸ್ವಲ್ಪ ಮತ ಬ್ಯಾಂಕ್‍ನ್ನು ಹಾಳು ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments