ಬೆಂಗಳೂರು,ಆ.29– ಮುಖ್ಯ ಮಂತ್ರಿಯವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ವಿರೋಧಪಕ್ಷಗಳ ಬಯಕೆ. ಅದು ಸಹಜವೂ ಇರಬಹುದು. ಆದರೆ ನಮ ಉದ್ದೇಶ ಮುಖ್ಯಮಂತ್ರಿಯವರು ಐದು ವರ್ಷ ಮುಂದುವರೆಯಬೇಕು ಎಂಬುದಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಹಜವಾಗಿ ಅವರು ಈ ರೀತಿ ಹೇಳಲೇಬೇಕು. ಅವರ ಉದ್ದೇಶವೂ ಅದೇ ಆಗಿರುತ್ತದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಅಭಿಯೋಜನೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್ಗೆ ಸಲ್ಲಿಸಲಾಗಿರುವ ರಿಟ್ ಅರ್ಜಿಯಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಪರಪ್ಪನ ಅಗ್ರಹಾರ ಬಂಧೀಖಾನೆಯಲ್ಲಿ ನಟ ದರ್ಶನ್ ಹೆಚ್ಚುವರಿ ಸೌಲಭ್ಯ ಪಡೆದಿರುವ ಘಟನೆ ವರದಿಯಾದ ಬೆನ್ನಲ್ಲೇ ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಜೈಲಿನ ಅಧಿಕಾರಿಗಳು ತೀರ್ಮಾನಿಸಿದರು. ಎಂಟತ್ತು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ದರ್ಶನ್ ಸ್ಥಳಾಂತರವಾಗಿದೆಯೋ, ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲ ಎಂದು ನಗುತ್ತಾ ಹೇಳಿದರು.
ಭದ್ರತಾ ದೃಷ್ಟಿಯಿಂದ ಯಾರು, ಎಲ್ಲಿಗೆ ಸ್ಥಳಾಂತರವಾಗಬೇಕು ಎಂಬ ನಿರ್ಧಾರವನ್ನು ಜೈಲಿನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಗೆ ಜಮೀರ್ ಅಹಮದ್ ಖಾನ್ ಉಸ್ತುವಾರಿ ಸಚಿವರಾಗಿರುವುದಕ್ಕೂ ದರ್ಶನ್ ಅವರನ್ನು ಅಲ್ಲಿಗೆ ಸ್ಥಳಾಂತರಿಸುತ್ತಿರುವುದಕ್ಕೂ ಸಂಬಂಧವಿಲ್ಲ.
ಯಾವುದೇ ಜಿಲ್ಲೆಯಾದರೂ ಒಬ್ಬ ಉಸ್ತುವಾರಿ ಸಚಿವರಿದ್ದೇ ಇರುತ್ತಾರೆ. ಜಮೀರ್ ಅಹಮದ್ ಖಾನ್ರಿಂದಾಗಿ ದರ್ಶನ್ ಮತ್ತಷ್ಟು ಸೌಲಭ್ಯ ಪಡೆಯುತ್ತಾರೆ ಎಂಬುದು ಆಧಾರರಹಿತವಾಗಿದೆ. ಯಾರೇ ಇದ್ದರೂ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬಂಧೀಖಾನೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಈವರೆಗೂ ಮಧ್ಯಂತರ ಅವಧಿ ಮಾತ್ರ ಸಲ್ಲಿಕೆಯಾಗಿದೆ. ಸಂಪೂರ್ಣ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ನೇಮಕಾತಿ ಕುರಿತಂತೆ ಈಗಾಗಲೇ ರಾಜ್ಯಸರ್ಕಾರ ಪೂರ್ವಾನುಮತಿ ಪಡೆದು 545 ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಿದೆ.
ಹಗರಣಕ್ಕೆ ಸಂಬಂಧಪಟ್ಟಂತೆ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೆಲವು ಮಸೂದೆಗಳನ್ನು ವಾಪಸ್ ಕಳುಹಿಸಿ ಸ್ಪಷ್ಟನೆ ಕೇಳಿದ್ದಾರೆ. ಅದನ್ನು ಪರಿಶೀಲಿಸಿ ಮರು ಸಲ್ಲಿಸಲಾಗುವುದು. ಇದರ ಹಿಂದೆ ರಾಜಕೀಯ ಇದೆ ಎಂದು ನಮಗೆ ಅನ್ನಿಸುವುದಿಲ್ಲ. ಒಂದು ವೇಳೆ ಆ ರೀತಿ ಇದ್ದರೆ ರಾಜಕೀಯವಾಗಿಯೂ ಪ್ರತಿಕ್ರಿಯಿಸುತ್ತೇವೆ. ಮತ್ತೊಮೆ ತಿರಸ್ಕಾರಗೊಂಡರೆ ಆಗ ಮರು ಪರಿಶೀಲಿಸುತ್ತೇವೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯಸಚಿವ ಸಂಪುಟ ಸಭೆ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸಲಾಗಿದ್ದು, ಅದು ನ್ಯಾಯಮೂರ್ತಿ ಸೋಮಶೇಖರ್ ಅವರ ಪೀಠದಲ್ಲಿ ವಿಚಾರಣೆಗೊಳಪಡಲಿದೆ. ಬಹುತೇಕ ಉಪಮುಖ್ಯಮಂತ್ರಿಯವರಿಗೂ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಯನ್ನು 40 ವರ್ಷಗಳಿಗೆ ಹೆಚ್ಚಿಸುವಂತೆ ಬೇಡಿಕೆಗಳಿವೆ. ಅದಕ್ಕೆ ಆಕ್ಷೇಪಗಳೂ ಇವೆ. ಸೇವೆಗೆ 16 ವರ್ಷಕ್ಕೆ ನೇಮಕಾತಿಯಾಗುತ್ತದೆ. ಪೊಲೀಸರ ನೇಮಕಾತಿಗೆ 40 ವರ್ಷ ಹೆಚ್ಚಿಸಿದರೆ ಸೇವಾವಧಿ ಸಿಗುವುದಿಲ್ಲ ಎಂಬ ಆಕ್ಷೇಪವನ್ನು ಯುವ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.
ಈವರೆಗೂ ಯಾವುದೇ ತೀರ್ಮಾನವಾಗಿಲ್ಲ. ಪರಿಶೀಲನೆ ನಡೆಯುತ್ತಿದೆ ಎಂದರು.ಪ್ರತಿವರ್ಷ 2,500 ಹುದ್ದೆಗಳು ನಿವೃತ್ತಿಯಿಂದ ತೆರವಾಗಲಿವೆ. ನೇಮಕಾತಿ ಮಾಡಿಕೊಳ್ಳಲು ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ವಿವಿಧ ಹಂತದ 3,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಹಂತದಲ್ಲಿದೆ ಎಂದು ತಿಳಿಸಿದರು.