“ಮತ್ತೆ ನಾನೇ ಸಿಎಂ ಆಗ್ತೀನಿ ನಿಮ್ಮ ಕಷ್ಟ ಬಗೆಹರಿಸ್ತಿನಿ : ನೆರೆ ಸಂತ್ರಸ್ತರಿಗೆ ಸಿದ್ದು ಸಾಂತ್ವಾನ

ಬಾಗಲಕೋಟೆ, ಅ.23- ಜೀವನವೇ ಸಾಕಾಗಿ ಹೋಗಿದೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ. ಪ್ರವಾಹ ಪೀಡಿತ ಗ್ರಾಮಗಳ ಮುಳುಗಡೆಯಿಂದ ನಮಗೆ ಶಾಶ್ವತವಾಗಿ ಮುಕ್ತಿ ಕೊಡಿ ಎಂದು ಸಂತ್ರಸ್ತರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಕೈ ಮುಗಿದು ಅಂಗಲಾಚಿದ ಪ್ರಸಂಗ ನಡೆದಿದೆ.

ತಮ್ಮ ಸ್ವ ಕ್ಷೇತ್ರ ಬಾದಾಮಿಯಲ್ಲಿಂದು ಪ್ರವಾಸ ಮಾಡಿದ ಸಿದ್ದರಾಮಯ್ಯ ಎದುರು ನೆರೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು.2009ರಲ್ಲಿ ಪ್ರವಾಹ ಬಂದಿತ್ತು. ಆಗಲೂ ನಮ್ಮ ಊರು ಮುಳುಗಡೆಯಾಗಿತ್ತು. ಈಗ ಮತ್ತೊಮ್ಮೆ ಪ್ರವಾಹ ಉಂಟಾಗಿದೆ.

ಒಂದೇ ವರ್ಷದಲ್ಲಿ ಎರಡು ಬಾರಿ ಇಡೀ ಊರೇ ಮುಳುಗಡೆಯಾಗಿದೆ, ಜಮೀನುಗಳು ಜಲಾವೃತಗೊಂಡಿವೆ, ಬೆಳೆಗಳು ನಾಶವಾಗಿವೆ, ರಸ್ತೆಗಳು ಕೊಚ್ಚಿ ಹೋಗಿವೆ, ಹೊರ ಭಾಗಕ್ಕೆ ಸಂಪರ್ಕವೇ ಇಲ್ಲದಂತಾದೆ. ಮನೆಯಲ್ಲಿದ್ದ ದವಸ, ಧಾನ್ಯ ಸಂಪೂರ್ಣ ಹಾಳಾಗಿದೆ. ತಿನ್ನಲೂ ಗತಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತೀ ಭಾರಿ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ.

ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ, ಮುಳುಗಡೆಯಿಂದ ಮುಕ್ತಿಕೊಡಿಸಿ ಎಂದು ಕೈಮುಗಿದು ಬೇಡಿಕೊಂಡಿದ್ದಲ್ಲದೆ, ನಿಮ್ಮ ಕಾಲಿಗೆ ಬೀಳುತ್ತೇವೆ ಸಮಸ್ಯೆ ಬಗೆಹರಿಸಿ ಎಂದು ಬೇಡಿಕೊಂಡರು. ಮುಮ್ಮರೆಡ್ಡಿಕೊಪ್ಪ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಅಲ್ಲಿಗೆ ಕಾರಿನಲ್ಲಿ ಹೋಗಲು ಸಾಧ್ಯವಾಗದೆ ಸಿದ್ದರಾಮಯ್ಯ ಅವರು ಪೊಲೀಸ್ ಜೀಪಿನಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಯಿತು.

ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅತಿವೃಷ್ಟಿಯ ಅನಾಹುತಗಳ ಬಗ್ಗೆ ವಿಧಾನಸಭೆಯಲ್ಲಿ ನಾನು ಐದು ಗಂಟೆಗಳ ಕಾಲ ಸುಧೀರ್ಘ ಭಾಷಣ ಮಾಡಿದ್ದೆ. ಆದರೆ, ಸರ್ಕಾರ ಒಂದು ನಿಮಿಷದಲ್ಲಿ ಉತ್ತರ ಕೊಟ್ಟು ಸುಮ್ಮನಾಯಿತು.

ನಾನು ಎಷ್ಟು ಕಿವಿ ಹಿಂಡಿದರೂ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಮುಂದಿನ ಬಾರಿ ನಾನೇ ಮುಖ್ಯಮಂತ್ರಿಯಾಗುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಸಿದ್ದರಾಮಯ್ಯ ಧೈರ್ಯ ಹೇಳಿದರು.

Sri Raghav

Admin