ಚೆನ್ನೈ : ದ್ರಾವಿಡ ಚಳುವಳಿಯ ಪಿತಾಮಹ ಪೆರಿಯಾರ್ ಅವರ ಸಮಾಧಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಪರಿಯಾರ್ ಅವರ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ದ್ರಾವಿಡ ಪಕ್ಷದ ಅಧ್ಯಕ್ಷ ವೀರಮಣಿ ಅವರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ತಮಿಳುನಾಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸೆಲ್ವ ಪಿರುಂಗುದಗೈ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸಮಸಮಾಜ ಹಾಗೂ ಶೋಷಣೆ ಮುಕ್ತ ಸಮಾಜಕ್ಕೆ ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಸಿದ್ದಾಂತಗಳು ಪರಿಣಾಮಕಾರಿಯಾಗಿವೆ. ನಾವು ಇವುಗಳನ್ನು ಪಾಲಿಸುವ ಅಗತ್ಯವಿದೆ. ನಾನು ರಾಜಕೀಯ ಜೀವನದಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಅನುಯಾಯಿ ಎಂದು ಅವರು ಹೇಳಿದರು.
ನಿನ್ನೆ ತಮಿಳುನಾಡಿನಲ್ಲಿ ವಿಡುದಲೈ ಚಿರುದೈಗಳ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ತಿರುಮಾವಲವನ್ ಅವರು ಸಿದ್ದರಾಮಯ್ಯ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸಿದರು.