ಮೈಸೂರು, ಫೆ.11- ನರೇಂದ್ರ ಮೋದಿಯವರ ಜೊತೆ ಮಾತನಾಡಲು ರಾಜ್ಯದ ಯಾವೊಬ್ಬ ಸಂಸದರಿಗೂ ಧೈರ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಶೇ.75-80ರಷ್ಟು ಕೇಂದ್ರ ಶೇ.20-25ರಷ್ಟು ರಾಜ್ಯ ಕೊಡಬೇಕು. ಆದರೆ ಈಗ ಕೇಂದ್ರ ಶೇ.50ರಷ್ಟು ಮಾತ್ರ ಕೊಡುತ್ತದೆ. ರಾಜ್ಯ ಉಳಿದ ಶೇ.50ರಷ್ಟು ಕೊಡಬೇಕು. ಇದರಿಂದ ಕೇಂದ್ರ ಸರ್ಕಾರದ ನಮ್ಮ ಪಾಲು ಕಡಿಮೆ ಆಗಿದೆ.
2022ನೇ ಇಸವಿ ಜೂನ್ ತಿಂಗಳಿಗೆ ಕಾಂಪನ್‍ಸೇಷನ್ ಕೊಡೋದು ಮುಗಿದು ಹೋಯಿತು. ಸುಮಾರು 20 ಸಾವಿರ ಕೋಟಿ ಕಾಂಪನ್‍ಸೇಷನ್ ರಾಜ್ಯಕ್ಕೆ ಕೊಡುತ್ತಿತ್ತು. ಅದು 2022 ಜೂನ್‍ಗೆ ಮುಗಿದಿದೆ. ಆದಾದ ನಂತರ ಅನುದಾನ ಕಡಿಮೆ ಆಯಿತು. ಅದಕ್ಕೆ ಇನ್ನೈದು ವರ್ಷ ಕಾಂಪನ್‍ಸೇಷನ್ ಕೊಡಲು ಒತ್ತಾಯ ಮಾಡಿ. ಎಲ್ಲಾ ರಾಜ್ಯಗಳ ಜೊತೆ ಸೇರಿಕೊಂಡು ಜಿಎಸ್ ಟಿ ಕೌನ್ಸಿಲ್ ನಲ್ಲಿ ಒತ್ತಾಯ ಮಾಡಿ ಅಂದರೆ ಇವತ್ತಿನವರೆಗೂ ಅದನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಈ ವ್ಯತ್ಯಾಸಕ್ಕೆ ಕೇಂದ್ರ ಸರ್ಕಾರ ಇವರಿಗೆ ಕ್ಯಾರೆ ಎನ್ನುತ್ತಿಲ್ಲ. ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯೆ. 25 ಮಂದಿ ಸಂಸದರಿದ್ದಾರೆ. ಆದರೆ ಇವರಿಗೆ ನರೇಂದ್ರ ಮೋದಿಯವರ ಜೊತೆ ಮಾತನಾಡಲು ಧೈರ್ಯವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಂದ್ರ ಮೋದಿಯವರು ಇವೆಲ್ಲ ಮಾಡದೇನೇ ಪಾರ್ಲಿಮೆಂಟ್‍ನಲ್ಲಿ ವಂಶಪಾರಂಪರಿಕ ಆಡಳಿತ ದೇಶಕ್ಕೆ ಅಪಾಯಕಾರಿ ಅಂತ ಭಾಷಣ ಹೊಡಿತಾರೆ. ನರೇಂದ್ರ ಮೋದಿಯವರು ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶ ದಿವಾಳಿಯಾಗುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಸಾಲ ಗೊತ್ತಾ ನಿಮಗೆ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಇರುವಾಗ ದೇಶದ ಮೇಲಿದ್ದ ಸಾಲ 53ಲಕ್ಷ 11ಸಾವಿರ ಕೋಟಿ. ಈಗ ಈ ವರ್ಷದ ಅಂತ್ಯಕ್ಕೆ ದೇಶದ ಮೇಲಿರುವ ಸಾಲ 135 ಲಕ್ಷದ 87ಸಾವಿರ ಕೋಟಿ. ಈ ಬಜೆಟ್‍ನಲ್ಲಿ 11ಲಕ್ಷದ 59ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದು ಹೇಳಿದ್ದಾರೆ. ಬಡ್ಡಿ ಒಂದು ವರ್ಷಕ್ಕೆ 9ಲಕ್ಷ ಚಿಲ್ಲರೆ ಕೋಟಿ ಕಟ್ಟುತ್ತಾರೆ ಎಂದು ವಿವರಿಸಿದರು.
ನರೇಂದ್ರ ಮೋದಿ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಎಂದು ಭಾಷಣ ಮಾಡುತ್ತಾರೆ. ಅಚ್ಛೇದಿನ್ ಆಯೇಗಾ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್ ಎಲ್ಲ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸಲು ಆಗುತ್ತಿಲ್ಲ, ಇವರಿಂದ ಏನಾದರೂ ಬಜೆಟ್ ನಿರೀಕ್ಷಿಸಲಿಕ್ಕಾಗತ್ತಾ? ಕರ್ನಾಟಕ 20 ವರ್ಷ ಹಿಂದಕ್ಕೆ ಹೋಗಿದೆ. ಒಂದೇ ಒಂದು ಮನೆ ಮಂಜೂರು ಮಾಡಿರೋದನ್ನು ತೋರಿಸಿ, ಭವಿಷ್ಯದೆಡೆಗೆ ಭರವಸೆಗಳ ಹೆಜ್ಜೆ ಎಲ್ಲಿದೆರಿ ಭವಿಷ್ಯ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯನವರ ಜೊತೆ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಮರಿಗೌಡ ಮತ್ತಿತರಿದ್ದರು.
