ನವದೆಹಲಿ,ಫೆ.25- ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೊರೊನಾ ನಿಭಾಯಿಸಲು ವಿಫಲವಾಗಿದೆ. ಎಲ್ಲ ರಂಗಗಳಲ್ಲಿಯೂ ವೈಫಲ್ಯ ಅನುಭವಿಸಿದೆ. ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮಾಡಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರದ ಪ್ರತಿನಿಧಿಗಳೇ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರದ ಅವಯಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ ಸಲ್ಲಿಸಲಾಗಿತ್ತು. ಅದನ್ನು ಕೇಂದ್ರ ಜಲ ಆಯೋಗವು ಒಪ್ಪಿಕೊಂಡಿತ್ತು. ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆಯುವುದು ಮಾತ್ರ ಬಾಕಿಯಿತ್ತು. ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಶೀಘ್ರವೇ ಅನುಮತಿ ಪಡೆದು ಯೋಜನೆ ಆರಂಭಿಸಬಹುದಿತ್ತು. ಆದರೆ ಅಂತಹ ಯಾವ ಪ್ರಯತ್ನಗಳು ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಜಾರಿಯಾದರೆ ಮುಂದಿನ 20ರಿಂದ 30 ವರ್ಷಗಳ ಕಾಲ ನೀರಿನ ಸಮಸ್ಯೆ ಬಗೆಹರಿಯಲಿದೆ. ಬಿಜೆಪಿ ಮನಸ್ಸು ಮಾಡಿದರೆ ಎರಡುಮೂರು ತಿಂಗಳಲ್ಲೇ ಅನುಮತಿ ಪಡೆಯುವ ಸಾಧ್ಯತೆಯಿದೆ. ಆದರೆ ಸಂಸದರು, ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದು ಹೇಳಿದರು.
ಸಚಿವ ಈಶ್ವರಪ್ಪ ಅವರಿಗೆ ರಾಷ್ಟ್ರಧ್ವಜ ಎಂದರೇನು ಎಂಬುದೇ ಗೊತ್ತಿಲ್ಲ. ಬಿಜೆಪಿಯ ಯಾವ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರಲಿಲ್ಲ. ಅದಕ್ಕಾಗಿ ರಾಷ್ಟ್ರಧ್ವಜ ಯಾವಾಗ ಹುಟ್ಟಿತು, ಅದರ ಹಿನ್ನೆಲೆ ಏನೆಂಬುದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಪ್ರಜಾಪ್ರಭುತ್ವದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಇದನ್ನೆ ದೊಡ್ಡದಾಗಿ ಬಿಂಬಿಸಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಹುಲ್ ಗಾಂ ಅವರೊಂದಿಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್‍ನ ಎಲ್ಲ ನಾಯಕರು ಜನರ ನಡುವೆ ಇರಬೇಕು. ಹೀಗಾಗಿ ಬೆಂಗಳೂರು ಬಿಟ್ಟು ಕ್ಷೇತ್ರಗಳಿಗೆ ತೆರಳುವಂತೆ ಶಾಸಕರಿಗೆ, ಮಾಜಿ ಶಾಸಕರಿಗೆ, ಹಿರಿಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದರು.
ಮೇಕೆದಾಟು ಪಾದಯಾತ್ರೆ ಫೆ.27ರಿಂದ ಆರಂಭವಾಗಲಿದೆ. ಅದರಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದೇವೆ. ನಮ್ಮ ನೀರು, ನಮ್ಮ ಹಕ್ಕು ಹೋರಾಟಕ್ಕೆ ಚಲನಚಿತ್ರರಂಗ ಸೇರಿದಂತೆ ಎಲ್ಲ ಕ್ಷೇತ್ರಗಳು ಕೈ ಜೋಡಿಸಲಿವೆ ಎಂದು ಹೇಳಿದರು.
