ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸಿದ್ದರಾಮಯ್ಯ ಕಣಕ್ಕೆ

Social Share

ಬೆಂಗಳೂರು, ನ.13- ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರದಿಂದಲೇ ಕಣಕ್ಕಿಳಿಯುವ ಮುನ್ಸೂಚನೆಯನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕು ಗೊಳ್ಳುತ್ತಿದ್ದು,
ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ರ್ಪಧಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇಂದು ಅದಕ್ಕೆ ಬಹುತೇಕ ತೆರೆ ಬಿದಿದೆ.

ಇಂದು ಬೆಳಗ್ಗೆ ಆಯ್ದ ನಾಯಕರೊಂದಿಗೆ ಕೋಲಾರಕ್ಕೆ ತೆರಳಿದ್ದ ಸಿದ್ದರಾಮಯ್ಯ, ಮೆಥೋಡಿಸ್ಟ್ ಚರ್ಚ್ ಬಳಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಮತ್ತೊಮ್ಮೆ ಕೋಲಾರಕ್ಕೆ ಬರುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕೋಲಾರದಿಂದಲೇ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.

ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

ಮಾತು ಮುಂದುವರೆಸಿದ ಅವರು, ತಮಗೆ ಚುನಾವಣೆಯಲ್ಲಿ ಸ್ರ್ಪಧಿಸಲು ಹಲವು ಕ್ಷೇತ್ರಗಳಿಂದ ನನಗೆ ಆಹ್ವಾನ ಬಂದಿದೆ. ಕೋಲಾರ, ಬಾದಾಮಿ, ಚಾಮರಾಜನಗರ, ಚಾಮರಾಜಪೇಟೆ, ವರುಣಾ ಸೇರಿದಂತೆ ಹಲವು ಕ್ಷೇತ್ರಗಳ ಕಾರ್ಯಕರ್ತರು ಮುಖಂಡರು ತಮ್ಮ ಕ್ಷೇತ್ರದಿಂದಲೇ ಸ್ರ್ಪಸುವಂತೆ ಒತ್ತಡ ಹಾಕುತ್ತಿದ್ದಾರೆ. ನಿಲ್ಲೆಲ್ಲರ ಅಭಿಮಾನಕ್ಕೆ ಚಿರಗಯಣಿ ಎಂದಿದ್ದಾರೆ.

ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಜಾತಿ, ಧರ್ಮ ಬೇಧವಿಲ್ಲದೆ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಪಕ್ಷ ನಮ್ಮದಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದ್ದಾರೆ.

ಕ್ಷೇತ್ರದ ಆಯ್ಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಿಕ್ಕಾಗಿಯೇ ಇಂದು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದ್ದರು. ವಿಶೇಷವಾಗಿ ರೂಪಿಸಲಾಗಿರುವ ವಿಶೇಷ ಬಸ್‍ನಲ್ಲಿ ಮಾಜಿ ಸಚಿವರಾದ ಎಂ.ಆರ್.ಸೀತಾರಾಮ್, ಶಾಸಕ ಬೈರತಿ ಸುರೇಶ್, ಮಾಜಿ ಶಾಸಕರಾದ ಸುಧಾಕರ್, ವಿ.ಮುನಿಯಪ್ಪ ಮತ್ತಿತರರೊಂದಿಗೆ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದರು.

ಆರಂಭದಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇಂದು ತಾವು ಕೋಲಾರಕ್ಕೆ ತೆರಳುತ್ತಿದ್ದು, ಅಲ್ಲಿ ಸ್ಥಳೀಯ ನಾಯಕರ ಜತೆ ಚರ್ಚೆ ನಡೆಸುವುದಾಗಿ ಹೇಳಿದರು.

ಹಾಲಿ ಶಾಸಕರಾಗಿರುವ ಶ್ರೀನಿವಾಸ್‍ಗೌಡ ಅವರು ಮುಂದಿನ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್‍ಗೆ ಬರಲಿದ್ದಾರೆ. ಅಭ್ಯರ್ಥಿಗಳ ಕೊರತೆ ಇರುವುದರಿಂದ ತಮಗೆ ಕೋಲಾರದಿಂದ ಆಹ್ವಾನ ಬಂದಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ನಿರ್ಧಾರವಾಗುತ್ತದೆ ಎಂದಿದ್ದಾರೆ.

ತಾವು ಇಂದು ಕೋಲಾರದಲ್ಲಿ ನಾಯಕರ ಜತೆ ಚರ್ಚೆ ಮಾಡಲು ಮಾತ್ರ ತೆರಳುತ್ತಿದ್ದೇವೆ. ನಾಮಪತ್ರ ಸಲ್ಲಿಸಲು ಹೋಗುತ್ತಿಲ್ಲ. ಮೊದಲು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದರು.

ಅಲ್ಲಿ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮೆಥೋಡಿಸ್ಟ್ ಚರ್ಚ್‍ಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬೆಂಬಲಿಗರೊಂದಿಗೆ ಮಾತನಾಡಿದರು. ನಂತರ ಕಾಲೇಜು ವೃತ್ತದಲ್ಲಿ ವಾಲ್ಮಿಕಿ ಮಹರ್ಷಿ ಪ್ರತಿಮೆ, ನಂತರ ಇಟಿಸಿಎಂ ಸರ್ಕಲ್‍ನಲ್ಲಿರುವ ಸಂಗೋಳ್ಳಿರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡಿದ ಬಳಿಕ ಕ್ಲಾಕ್‍ಟವರ್ ಬಳಿ ಕುತುಬ್ ಶಾ ದರ್ಗಾಕ್ಕೆ ಭೇಟಿ ನೀಡಿ ನಂತರ ಕೈವಾರ ತಾತಯ್ಯ ವಿಗ್ರಹಕ್ಕೂ ಮಾಲಾರ್ಪಣೆ ಮಾಡಿದರು. ನಂತರ ಕೆ.ಸಿ.ವ್ಯಾಲಿ ಯೋಜನೆಯಿಂದ ಸೃಷ್ಟಿಯಾದ ನರಸಾಪುರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಸಿದ್ದರಾಮಯ್ಯ ಅವರ ಪ್ರವಾಸದಿಂದ ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಸಿತ್ತು. ಮಾಜಿ ಸಚಿವ ರಮೇಶ್ ಕುಮಾರ್ ಮತ್ತು ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಭಾರೀ ತೂಕದ ಸೇಬಿನ ಹಾರ ಹಾಕಿ ಬರ ಮಾಡಿಕೊಂಡರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಎಂದು ಕಾರ್ಯಕರ್ತರು ಜಯ ಘೋಷ ಕೂಗಿದರು.

ಮುನಿಯಪ್ಪ ಗೈರು: ಕೇಂದ್ರದ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲೆಯ ಪ್ರಮುಖ ನಾಯಕ ಕೆ.ಎಚ್.ಮುನಿಯಪ್ಪ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮುನಿಯಪ್ಪ ಬೇರೆ ರಾಜ್ಯ ಪ್ರವಾಸದಲ್ಲಿದ್ದಾರೆ ಎಂದು ಹೇಳಲಾಗಿದೆ.

ಅವರ ಪುತ್ರ ರೂಪಾ ಶಶಿಧರ್ ಜಿಲ್ಲೆಯಲ್ಲೂ ಇದ್ದರೂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಬದಲಿಗೆ ಮುನಿಯಪ್ಪ ಅವರ ವಿರೋಧಿ ಪಾಳೇಯದಲ್ಲಿ ಗುರುತಿಸಿಕೊಂಡಿರುವ ರಮೇಶ್ ಕುಮಾರ್, ಡಾ.ಎಂ.ಸಿ.ಸುಧಾಕರ್ ಹಾಗೂ ಮತ್ತಿತರರು ಇಂದು ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡರು.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕ್ಷೇತ್ರದ ಆಯ್ಕೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ನಾಮಪತ್ರ ಸಲ್ಲಿಸುವ ವೇಳೆಗೆ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದೇನೆ ಅಷ್ಟೆ ಎಂದಿದ್ದಾರೆ.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

ಕ್ಷೇತ್ರ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಸಾಕಷ್ಟು ಪೂರ್ವ ತಯಾರಿ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ತಾವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಎರಡು ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಿದ್ದಾರೆ. ಆ ಸಮೀಕ್ಷೆಗಳಲ್ಲಿ ಕೋಲಾರ ಸುರಕ್ಷಿತ ಎಂಬ ವರದಿ ಇದೆ ಎನ್ನಲಾಗಿದೆ.

ಹಾಲಿ ಸ್ಪರ್ಧೆ ಮಾಡುತ್ತಿರುವ ಬಾದಾಮಿ ದೂರದ ಊರಾಗಿದ್ದು, ಪ್ರತಿವಾರವೂ ಅಲ್ಲಿಗೆ ಭೇಟಿ ನೀಡಲು ಕಷ್ಟವಾಗುತ್ತಿರುವುದರಿಂದ ಈ ಬಾರಿ ಅಲ್ಲಿಂದ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಶಾಸಕರಾಗಿರುವುದರಿಂದ ಅವರನ್ನು ಮುಂದುವರೆಸುವುದು ಸಿದ್ದರಾಮಯ್ಯ ಅವರ ಇಂಗಿತವಾಗಿದೆ ಎನ್ನಲಾಗಿದೆ.

ಉಳಿದಂತೆ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರಗಳು ಸುರಕ್ಷಿತವಲ್ಲ ಎಂಬ ವರದಿಗಳಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಒಂದು ಕಾಲದ ಆಪ್ತ ಗೆಳೆಯ ಹಾಗೂ ಪ್ರಸ್ತುತ ರಾಜಕೀಯ ಎದುರಾಳಿಯಾಗಿರುವ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿರೋಧಿ ಚಟುವಟಿಕೆ ನಡೆಸಬಹುದು ಎಂಬ ಕಾರಣಕ್ಕೆ ಆ ಕ್ಷೇತ್ರವನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿಜೆಪಿ ಪ್ರಬಲವಾಗುತ್ತಿತ್ತು, ಅತ್ಯಂತ ಕೋಮು ಸೂಕ್ಷ್ಮವಾಗಿ ಪರಿವರ್ತನೆಯಾಗಿದೆ. ಜೊತೆಗೆ ಜೆಡಿಎಸ್ ಒಳ ಒಪ್ಪಂದದ ಆತಂಕವೂ ಕಾಡುತ್ತಿದೆ. ಅಂತಿಮವಾಗಿ ಸಿದ್ದರಾಮಯ್ಯ ಕೋಲಾರದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

Articles You Might Like

Share This Article