ಕೋಲಾರದಿಂದಲೇ ಕಣಕ್ಕಿಳಿಯಲು ಸಿದ್ದರಾಮಯ್ಯ ಪೂರ್ವ ತಯಾರಿ, ಮುನಿಯಪ್ಪ ಜೊತೆ ಮೀಟಿಂಗ್

Social Share

ಬೆಂಗಳೂರು,ಜ.9- ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಕೆಲ ಕಾಂಗ್ರೆಸ್ ನಾಯಕರ ಜೊತೆ ಕೋಲಾರದ ಪ್ರಮುಖ ನಾಯಕ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಮಾಜಿ ಸಚಿವ ಎಂ.ಆರ್.ಸೀತಾರಾಂ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ, ಮಾಜಿ ಸಂಸದರಾದ ನಾರಾಯಣಸ್ವಾಮಿ, ಚಂದ್ರಪ್ಪ ಹಾಗೂ ಮತ್ತಿತರರು ಜೊತೆಯಲ್ಲಿದ್ದರು.

ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮವೊಂದರಲಿ ಭಾಗವಹಿಸುವ ಸಿದ್ದರಾಮಯ್ಯ ಬಳಿಕ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ಶಾಸಕ ಶ್ರೀನಿವಾಸಗೌಡರ ಮನೆಗೆ ಭೇಟಿ ನೀಡಲಿದ್ದಾರೆ. ಬಹುತೇಕ ಇಂದು ಸಿದ್ದರಾಮಯ್ಯ ಅವರ ಕ್ಷೇತ್ರದ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಕಳೆದ ಬಾರಿ ಬಾಗಲಕೋಟೆಯ ಬಾದಾಮಿ ಮತ್ತು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ರ್ಪಧಿಸಿದ್ದರು. ಚಾಮುಂಡೇಶ್ವರಿಲ್ಲಿ ಸೋಲು ಕಂಡು, ಬಾದಾಮಿಯಲ್ಲಿ ಗೆಲುವು ಕಂಡಿದ್ದರು. ಈ ಬಾರಿ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲಿ ತೋಡಗಿದ್ದರು.

ಬಂಧನಕ್ಕೊಳಗಾಗಿದ್ದ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಕೊಚ್ಚರ್ ಬಿಡುಗಡೆ

ಬಾದಾಮಿಯಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮತ್ತೆ ತಾವು ಸ್ರ್ಪಧಿಸಲು ಬಯಸಿದ್ದು ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಉತ್ತಮ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದರು.

ಇತ್ತ ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‍ನಿಂದ ಗೆದ್ದಿದ್ದ ಜಿ.ಟಿ.ದೇವೇಗೌಡ ಕೆಲ ದಿನಗಳ ಹಿಂದೆ ಕಾಂಗ್ರೆಸ್‍ನತ್ತ ಮುಖ ಮಾಡಿದ್ದರು, ಆದರೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅವರು ಜೆಡಿಎಸ್‍ನಲ್ಲೇ ಮುಂದುವರೆಸಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಜಿ.ಟಿ.ದೇವೇಗೌಡರಿಗೆ ಟಿಕೆಟ್ ಕೂಡ ಘೋಷಣೆ ಮಾಡಿದೆ.

ಹೀಗಾಗಿ ಮತ್ತೆ ಆ ಕ್ಷೇತ್ರದಿಂದ ಸ್ರ್ಪಧಿಸುವುದು ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಲ್ಲ ಎಂದು ಭಾವಿಸಲಾಗಿತ್ತು. ಇನ್ನೂ ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರರಿಗಾಗಿ ಬಿಟ್ಟುಕೊಟ್ಟಿದ್ದ ವರುಣಾ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿಗಳು ಹರಿದಾಡಿದವು. ಆದರೆ ಪುತ್ರನ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅಲ್ಲಿಂದ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಲಾಗಿದೆ.

ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‍ನಿಂದ ಶ್ರೀನಿವಾಸಗೌಡ ಸ್ಪರ್ಧೆ ಮಾಡಿದ್ದರು. ರಾಜಕೀಯ ಸ್ಥಿತ್ಯಂತರದಲ್ಲಿ ಅವರು ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಕೆಲ ಕಾಂಗ್ರೆಸ್ ನಾಯಕರ ಜೊತೆ ಕೋಲಾರಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿದ್ದರು. ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಭೇಟಿ ನೀಡಿದ್ದರು. ಆ ವೇಳೆಯಲ್ಲೇ ನಾಮಪತ್ರ ಸಲ್ಲಿಸಲು ಮತ್ತೆ ಬರುವುದಾಗಿ ಹೇಳಿದ್ದರು.

ಕೆಲವೇ ಗಂಟೆಗಳಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ತಮ್ಮ ಸ್ಪರ್ಧೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ತೇಲಿಸಿದರು. ಇತ್ತೀಚೆಗೆ ಟಿಕೆಟ್‍ಗಾಗಿ ಕಾಂಗ್ರೆಸ್‍ಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಕ್ಷೇತ್ರವನ್ನು ನಮೂದಿಸಿರಲಿಲ್ಲ. ಬದಲಾಗಿ ಹೈಕಮಾಂಡ್ ಸೂಚಿಸಿದ ಕ್ಷೇತ್ರಕ್ಕೆ ಎಂದು ಬರೆದಿದ್ದರು. ಹೈಕಮಾಂಡ್ ಕ್ಷೇತ್ರವನ್ನು ನೀವೆ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿ ಜಾರಿಕೊಂಡಿತ್ತು.

ಬಾದಾಮಿ ದೂರ ಇರುವುದರಿಂದ ಮತ್ತೆ ಅಲ್ಲಿಂದ ಸ್ಪರ್ಧೆ ಮಾಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಹತ್ತಿರದ ಕೋಲಾರದತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ಕೆ.ಎಚ್.ಮುನಿಯಪ್ಪ ಅಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆಲ ನಾಯಕರು ಒಳ ಸಂಚು ಮಾಡಿ ಮುನಿಯಪ್ಪ ಅವರನ್ನು ಸೋಲಿಸಿದ್ದರು. ನಂತರದ ಬೆಳವಣಿಗೆಯಲ್ಲಿ ತಮ್ಮ ವಿರುದ್ಧ ಸಂಚು ನಡೆಸಿದವರ ಜೊತೆಯಲ್ಲೇ ಸಿದ್ದರಾಮಯ್ಯ ಆಪ್ತರಾಗಿದ್ದಾರೆ ಎಂದು ಮುನಿಯಪ್ಪ ಸಿಟ್ಟು ಮಾಡಿಕೊಂಡಿದ್ದರು.

ರೇಸ್‍ ವೇಳೆ ಅಪಘಾತವಾಗಿ ಖ್ಯಾತ ರೇಸರ್ ಕುಮಾರ್ ದುರ್ಮರಣ

ಹೀಗಾಗಿ ಮುನಿಯಪ್ಪ ಅವರ ಮನವೋಲಿಕೆಗೆ ಸತತ ಪ್ರಯತ್ನಗಳು ನಡೆದಿವೆ. ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಸಿದ್ದರಾಮಯ್ಯ ನೇರವಾಗಿ ಮುನಿಯಪ್ಪ ಅವರ ಮನೆಗೆ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಅಕೃತ ಘೊಷಣೆಯೊಂದು ಬಾಕಿ ಇದೆ.

siddaramaiah, Kolar, assembly constituency, k h muniyappa,

Articles You Might Like

Share This Article