ಸಿಎಂ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

Social Share

ಬೆಂಗಳೂರು,ಮಾ.7- ಕೆಎಸ್‍ಡಿಎಲ್ ಟೆಂಡರ್ ಹಗರಣದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿ ತಲೆ ಮರೆಸಿಕೊಂಡಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ಅವರ ಪುತ್ರ ಪ್ರಶಾಂತ್ ಮಾಡಾಳು ಬಳಿ ಎಂಟು ಕೋಟಿ ರೂಪಾಯಿ ಪತ್ತೆಯಾಗಿದೆ. ಇದು ಶೇ.40 ಭ್ರಷ್ಟಾಚಾರಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ದಾಳಿಯಾದ ತಕ್ಷಣವೇ ಮಾಡಾಳು ವಿರುಪಾಕ್ಷಪ್ಪನನ್ನು ಬಂಧಿಸಬೇಕಿತ್ತು. ಆದರೆ ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿದೆ. ಈಗಲೂ ಅವರು ಬೆಂಗಳೂರಿನಲ್ಲೇ ಇದ್ದಾರೆ. ಜಾಮೀನು ಅರ್ಜಿ ಸಲ್ಲಿಸಿದ್ದಾರೆ, ಸರ್ಕಾರ ಅವರನ್ನು ಬಂಧಿಸದೆ ರಕ್ಷಣೆ ನೀಡುತ್ತಿದೆ. ಕಾನೂನಿನ ಪ್ರಕಾರ ತಪ್ಪು ಮಾಡಿದವರಿಗೆ ರಕ್ಷಣೆ ನೀಡುವುದು ಅಪರಾಧವಾಗಲಿದೆ ಎಂದು ಟೀಕಿಸಿದರು.

ಮಾಡಾಳ್ ಮಿಸ್ಸಿಂಗ್ : ಹುಡುಕಿಕೊಡುವಂತೆ ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್

ರಾಜ್ಯದಲ್ಲಿ ಕಮಿಷನ್ ದಂಧೆಯ ಪ್ರಮಾಣ ಶೇ.40ರಿಂದ ಮತ್ತಷ್ಟು ಹೆಚ್ಚಾಗಿದೆ. ಮೊನ್ನೆ ನಾನು ಭಾಷಣ ಮಾಡುವಾಗ ಸಾರ್ವಜನಿಕರೊಬ್ಬರು ಚೀಟಿ ಕಳುಹಿಸಿ, ತಾವು ಶೇ.53ರಷ್ಟು ಲಂಚ ನೀಡಿರುವುದಾಗಿ ಹೇಳಿದರು. ಹೀಗಾಗಿ ಭ್ರಷ್ಟಚಾರ ಮುಗಿಲು ಮುಟ್ಟಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಮುಚ್ಚಿ, ಎಸಿಬಿ ಮಾಡಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದ್ದಾರೆ. ಕಾನೂನಿನ ಕನಿಷ್ಠ ಜ್ಞಾನ ಇದ್ದವರ್ಯಾರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ನಾವು ಲೋಕಾಯುಕ್ತವನ್ನು ರದ್ದು ಮಾಡಿರಲಿಲ್ಲ, ವಿಶ್ವನಾಥ್ ಶೆಟ್ಟಿ ಲೋಕಾಯುಕ್ತರಾಗಿ ಅಧಿಕಾರ ಪೂರ್ಣಗೊಳಿಸಿದರು. ಅದಕ್ಕೂ ಮೊದಲು ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಭ್ರಷ್ಟಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭ್ರಷ್ಟಚಾರದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲು ಎಸಿಬಿ ರಚನೆ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು, ತೀರ್ಪು ನೀಡಿರುವ ಹೈಕೋರ್ಟ್ ಎಸಿಬಿ ಲೋಕಾಯುಕ್ತದ ಜೊತೆ ಕೆಲಸ ಮಾಡಲಿ ಎಂದು ಹೇಳಿದೆ.

ಬಿಜೆಪಿ ಸರ್ಕಾರ ಎಸಿಬಿ ರದ್ದು ಮಾಡಿಲ್ಲ, ನ್ಯಾಯಾಲಯ ಆದೇಶ ಪಾಲನೆ ಮಾಡಿದೆ. ಎಸಿಬಿ ರದ್ದು ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು, ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕ್ರಮ ಕೈಗೊಂಡಿರಲಿಲ್ಲ. ನ್ಯಾಯಾಲಯದ ವಿಚಾರಣೆಯ ವೇಳೆ ಸರ್ಕಾರದ ಅಡ್ವೋಕೆಟ್ ಜನರಲ್ ವಾದ ಮಂಡಿಸಿ, ಹಿಂದಿನ ಸರ್ಕಾರ ಎಸಿಬಿ ರದ್ದು ಮಾಡಿದ್ದು ಸರಿ, ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ಹೇಳಿದ್ದಾರೆ.

ಇದು ಸರ್ಕಾರದ ನಿಲುವಲ್ಲವೇ ? ಈಗ ಎಸಿಬಿ ರದ್ದು ಮಾಡಿದ್ದು ತಮ್ಮ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ, ಹಾಗಿದ್ದರೆ ಬಿಜೆಪಿ ಆಡಳಿತ ಇರುವ ಬೇರೆ ರಾಜ್ಯಗಳಲ್ಲಿ ಏಕೆ ಲೋಕಾಯುಕ್ತ ರಚನೆಯಾಗಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು

ಬಿಜೆಪಿ, ಜೆಡಿಎಸ್‍ಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಗೋಲ್ವಾಲ್ಕರ್ ಹಾಗೂ ಸಂಘ ಪರಿವಾರದ ಇತರ ನಾಯಕರ ಬರವಣಿಗೆ ನೋಡಿದರೆ ಅವರು ಎಂದಿಗೂ ಸಂವಿಧಾನವನ್ನು ಗೌರವಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಮೇಲ್ಜಾತಿಯ ಹಾಗೂ ಶ್ರೀಮಂತರ ಪಕ್ಷವಾಗಿದೆ. ತಳ ಸಮುದಾಯಗಳ ಶ್ರೇಯೋಭಿವೃದ್ಧಿ ಮತ್ತು ನಾಡಿನ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲ್ಲ.

ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಧರ್ಮ, ಜಾತಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಫರ್ಮಾನು ಹೊರಡಿಸಿರುವುದೇ ಸಾಕ್ಷಿ.

ಈ ಮೊದಲು ಹಿಂದುತ್ವ ಆಧಾರದ ಮೇಲೆ ಎರಡು ಚುನಾವಣೆಗಳನ್ನು ಹೆದರಿಸಿದರು, ಈ ಚುನಾವಣೆಯಲ್ಲಿ ಹಿಂಧುತ್ವ ಕೆಲಸ ಮಾಡಲಲ್ಲ ಎಂದು ಅರ್ಥವಾಗಿದೆ. ಅದಕ್ಕಾಗಿ ಹಣ ಖರ್ಚು ಮಾಡಿ ಗೆಲ್ಲಲು ಮುಂದಾಗಿದ್ದಾರೆ. ನಾಲ್ಕು ವರ್ಷದಿಂದ ಅಭಿವೃದ್ಧಿ ಮಾಡದರೆ ಲಂಚ ಹೊಡೆದು ಟನ್ ಗಟ್ಟಲೇ ಹಣವನ್ನು ಕೂಡಿಟ್ಟಿದ್ದಾರೆ. ಅದನ್ನು ಚುನಾವಣೆಯಲ್ಲಿ ಖರ್ಚು ಮಾಡಿ ಗೆಲ್ಲಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಖಾಸಗಿ ಸಂಸ್ಥೆಗಳ ಒಕ್ಕೂಟ ರುಪ್ಸಾ ಆರೋಪ ಮಾಡಿದಾಗ ಭ್ರಷ್ಟಚಾರಕ್ಕೆ ದಾಖಲೆ ಕೇಳುತ್ತಿದ್ದರು, ಹಿಂದಿನ ಸಿದ್ದರಾಮಯ್ಯ ಸರ್ಕಾರವೂ ಭ್ರಷ್ಟಚಾರ ಮಾಡಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ.

ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರು ಗಟ್ಟಿಯಾಗಿ ಇಲ್ಲೇ ನಿಲ್ಲಬೇಕು, ಮತ್ತೆ ಬಿಜೆಪಿ ಕಡೆ ತಿರುಗಿ ನೋಡಬೇಡಿ. ವಿಶೇಷವಾಗಿ ದಲಿತರು ಬಿಜೆಪಿಯತ್ತ ತಿರುಗಿ ನೋಡಬಾರದು. ಸ್ವಾಮಿ ವಿವೇಕಾನಂದ, ಮುನುವಾದಿ ಸಿದ್ಧಾಂತ ಮಾಡುವವರು, ಪುರೋಹಿತಶಾಹಿಗೆ ಬೆಂಬಲ ನೀಡುವರು ಈ ದೇಶಕ್ಕೆ ಶಾಪ ಎಂದು ಹೇಳಿದ್ದಾರೆ. ಹಾಗಾಗಿ ತಳಸಮುದಾಯಗಳು ಬಿಜೆಪಿಯತ್ತ ತಿರುಗಿ ನೋಡಬಾರದು. ಬಿಜೆಪಿ ದಲಿತರಿಗೆ ಜನಸಂಖ್ಯೆಗನುಗುಣವಾಗಿ ಅನುದಾನ ನೀಡದರೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

Siddaramaiah, KSDL, tender, scam, CM Bommai,

Articles You Might Like

Share This Article