“ಅಧಿಕಾರಕ್ಕಾಗಿ ಸಿದ್ದರಾಮಯ್ಯ ಸಿದ್ದರಹೀಮಯ್ಯ ಬೇಕಾದರೂ ಆಗ್ತಾರೆ”

Social Share

ಮೈಸೂರು,ಫೆ.5- ಸಿದ್ದರಾಮಯ್ಯನವರು ಚುನಾವಣೆಗೋಸ್ಕರ ಸಿದ್ದರಹೀಮಯ್ಯ ಅಂತ ಬೇಕಾದರೂ ಬದಲಾಗಿ ಬಿಡುತ್ತಾರೆ. ಅಧಿಕಾರಕ್ಕೋಸ್ಕರ ಏನೂ ಬೇಕಾದರೂ ಹೇಳಿಕೆಗಳನ್ನು ನೀಡುತ್ತಾರೆ. ಅವರ ಹೇಳಿಕೆಗಳನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಹಿಜಾಬ್ ಧರಿಸಿ ಶಾಲೆಗೆ ಬರುವುದು ಬೇಡ ಎಂದಿರುವುದು ಮುಸ್ಲಿಂ ಹೆಣ್ಣುಮಕ್ಕಳ ಸ್ವಾತಂತ್ರ್ಯ, ಶಿಕ್ಷಣ ಕಿತ್ತುಕೊಳ್ಳುವ ಷಡ್ಯಂತ್ರ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಏಕೆಂದರೆ ಅವರು ರಾಜಕಾರಣಕ್ಕೋಸ್ಕರ ಬಹಳಷ್ಟು ಮಾತುಗಳನ್ನು ಆಡುತ್ತಿರುತ್ತಾರೆ. ಗೋರಿಪಾಳ್ಯದ ಜಮೀರ್ ಅವರು ಚಾಮರಾಜಪೇಟೆಗೆ ಚುನಾವಣೆಗೆ ನಿಲ್ಲಿ ಬನ್ನಿ ಅಂತ ಕರೆಯುತ್ತಿದ್ದಾರೆ. ಅಲ್ಲಿ ಹೋಗಿ ಚುನಾವಣೆಗೆ ನಿಂತಾಗ ಯಾರಾದರೂ ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ ರಾಮ ಇದೆ ಅಂತ ಪ್ರಶ್ನೆ ಮಾಡಿದರೆ ಚುನಾವಣೆಗೋಸ್ಕರ ಸಿದ್ದರಹೀಮಯ್ಯ ಅಂತ ಬೇಕಾದರೂ ಹೆಸರಿಟ್ಟುಕೊಂಡು ಬಿಡುತ್ತಾರೆ. ರಾಜಕೀಯದಲ್ಲಿ ಅಕಾರಕ್ಕೋಸ್ಕರ ಅವರು ಏನು ಬೇಕಾದರೂ ಹೇಳಿಕೆಯನ್ನು ಕೊಡುತ್ತಾರೆ. ಅವರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು ವ್ಯಂಗ್ಯವಾಡಿದರು.
ಅವರದ್ದೇ ಸರ್ಕಾರ 2017-18ರ ಸಂದರ್ಭದಲ್ಲಿ ಇರುವಾಗ ಸಮವಸ್ತ್ರ ಸಂಹಿತೆಯನ್ನು ಏನು ಮಾಡಿದ್ದಾರೆ ಅದಕ್ಕನುಗುಣವಾಗಿಯೇ ಇವತ್ತು ಉಡುಪಿಯಲ್ಲಿಯೂ ಕೂಡ ಅಲ್ಲಿನ ಕಾಲೇಜು ಆಡಳಿತ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಪೂರಕವಾಗಿ ನಡೆದುಕೊಂಡಿದೆ. ಸಮವವಸ್ತ್ರ ಅನ್ನುವುದು ತಲೆತಲಾಂತರದಿಂದ ಬಂದಿದ್ದು. ಬಡವ, ಬಲ್ಲಿದ, ಆ ಧರ್ಮ, ಈ ಧರ್ಮ ಎಂಬ ತಾರತಮ್ಯವಿಲ್ಲದೆಯೇ ಸಮಾನತೆಯ ಭ್ರಾತೃತ್ವದ ವಾತಾವರಣದಲ್ಲಿ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕು ಅನ್ನುವ ಕಾರಣಕ್ಕೋಸ್ಕರ ತಂದಿರುವಂಥದ್ದು.
ಅದಕ್ಕನುಗುಣವಾಗಿ ಉಡುಪಿಯ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಕೂಡ ನಡೆದುಕೊಳ್ಳುತ್ತಿದೆ. ಶಾಸಕ ರಘುಪತಿ ಭಟ್ ಇರಬಹುದು, ಸಚಿವರಾದ ಬಿ.ಸಿ.ನಾಗೇಶ್ ಇರಬಹುದು, ಹಾಗೇ ಆರಗ ಜ್ಞಾನೇಂದ್ರ ಇರಬಹುದು ಈ ಸರ್ಕಾರಿ ನಿಯಮವನ್ನು ಬಹಳ ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ. ನಾನು ಅದಕ್ಕೋಸ್ಕರ ಅವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದರು.
ಎಲ್ಲ ರೀತಿಯ ಒತ್ತಡಗಳು, ಆಕ್ರಮಣಗಳು, ಟೀಕಾಪ್ರಕಾರಗಳ ನಡುವೆಯೂ ಯಾವುದಕ್ಕೂ ಮಣಿಯದೆ ನಿಯಮಗಳ ಅಡಿಯಲ್ಲೇ ಸಮವಸ್ತ್ರ ಹಾಕಿಕೊಂಡು ಬಂದೇ ಪಾಠವನ್ನು ಕೇಳಬೇಕು ಎಂದು ಅದಕ್ಕೆ ಬದ್ಧವಾಗಿ ಅದನ್ನು ಅನ್ವಯಮಾಡಿರುವುದಕ್ಕೋಸ್ಕರ ಒತ್ತಡಕ್ಕೆ ಮಣಿಯದೆ ಇರುವಂತದ್ದು ಬಹಳ ದೊಡ್ಡ ಕೆಲಸ. ಆ ಕೆಲಸವನ್ನು ಮಾಡಿ ಬಹಳ ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ.
ನನಗೆ ಆಶ್ಚರ್ಯ ತರುವ ಸಂಗತಿ ಎಂದರೆ ಯಾಕಾಗಿ ಹಠ ಹಿಡಿದು ವಿದ್ಯಾರ್ಥಿಗಳು ಕುಳಿತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಸರ್ಕಾರಿ ನಿಯಮಾವಳಿಗಳು ಮತ್ತು ಆದೇಶಗಳ ಚೌಕಟ್ಟಿನಲ್ಲಿ ಯಾಕಾಗಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಎನ್ನುವುದು ಇದು ಯಾವುದೋ ಒಂದು ಬಣ್ಣದ ಉಡುಪಲ್ಲ, ಪ್ರತ್ಯೇಕ ಭಾವನೆ, ತಾರತಮ್ಯ ಎನ್ನುವುದು ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಬರಬಾರದೆನ್ನುವ ಕಾರಣಕ್ಕೋಸ್ಕರ, ಅವರಲ್ಲಿ ಸಮಾನತೆ ಮತ್ತು ಭ್ರಾತೃತ್ವವನ್ನು ಬೆಳೆಸುವುದಕ್ಕೋಸ್ಕರ, ಈ ವಾತಾವರಣದಲ್ಲಿ ಎಲ್ಲರೂ ಕಲಿಯಬೇಕೆನ್ನುವುದಕ್ಕೋಸ್ಕರ ತಂದಿರುವಂತಹ ಒಂದು ಪದ್ಧತಿಯಾಗಿದೆ ಎಂದರು.
ಇಷ್ಟಾಗಿಯೂ ಕೂಡ ಎಲ್ಲರೂ ಕಾಲೇಜಿಗೆ ಬರೋದು ಜಾಬ್‍ಗೋಸ್ಕರ ಅಂತ ಹೇಳಿದರೆ ನೀವು ಹಿಜಾಬ್‍ಗೋಸ್ಕರ ಬರುತ್ತೇನೆ ಅಂದರೆ ನೀವು ಹಿಜಾಬ್ ಹಾಕ್ಕೊಂಡಾದರೂ ಹೋಗಿ, ಬುರ್ಖಾ ಹಾಕ್ಕೊಂಡಾದರೂ ಹೋಗಿ ಅಥವಾ ಮೊಣಕಾಲು ಕಾಣುವಂತಹ ಮುಕ್ಕಾಲು ಪೈಜಾಮಾ ಬೇಕಾದರೂ ಹಾಕ್ಕೊಂಡು ಹೋಗಿ. ಆದರೆ ನೀವು ಹೋಗಬೇಕಾದ ಸ್ಥಳ ಶಾಲಾ-ಕಾಲೇಜಲ್ಲ, ಮದರಸ ಎಂದು ಪ್ರತಾಪ್ ಸಿಂಹ ಹೇಳಿದರು.
ನಿಮಗೆ ಪ್ರತ್ಯೇಕ ಭಾವನೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರನೇ ಮದರಸಕ್ಕೂ ಕೂಡ ಸರ್ಕಾರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಸರ್ಕಾರನೂ ಕೂಡ ಅದಕ್ಕೆ ಫಂಡ್ ಕೂಡ ಮಾಡುತ್ತಿದೆ. ಅದಕ್ಕೆ ಹೋಗಿ, ಆದರೆ ಇಲ್ಲಿ ಎಲ್ಲಾ ಜಾತಿ, ಧರ್ಮ, ಪ್ರತಿಯೊಬ್ಬರೂ ಬರುವ ಶಾಲಾ-ಕಾಲೇಜುಗಳಲ್ಲಿ ಸರ್ಕಾರಿ ನಿಯಮಾವಳಿಗಳಿಗೆ ಅನುಗುಣವಾಗಿ ನಡೆಯಬೇಕು ಎಂದರು.

Articles You Might Like

Share This Article