ಮೈಸೂರು, ಆ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಟ್ಟೆ ಎಸೆತ ಪ್ರಕರಣವನ್ನು ನೆಪ ಮಾಡಿಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಪಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆಯನ್ನು ಯಾರೇ ಎಸೆದಿದ್ದರೂ ಅದು ತಪ್ಪೇ. ಆದರೆ ಅದನ್ನೇ ನೆಪ ಮಾಡಿಕೊಂಡು ಪಾದಯಾತ್ರೆ ಹಮ್ಮಿಕೊಂಡಿರುವುದು ಕೂಡ ತಪ್ಪು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ವತಃ ಮುಖ್ಯಮಂತ್ರಿ ಹೇಳಿದ ಮೇಲೂ ಈ ರೀತಿ ಹಠಕ್ಕೆ ಬಿದ್ದಿರುವುದು ಸರಿಯಲ್ಲ.
ಇನ್ನು ಮುಂದಾದರೂ ಸಿದ್ದರಾಮಯ್ಯ ಅವರು ಶಾಂತ ರೀತಿಯಿಂದ ವರ್ತಿಸಲಿ. ಇದನ್ನು ಮೀರಿಯೂ ಪಾದಯಾತ್ರೆ ನಡೆಸಿದರೆ ಕೊಡಗಿನಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಏನಾದರೂ ಅನಾಹುತವಾದರೆ ಅದಕ್ಕೆ ಸಿದ್ದರಾಮಯ್ಯರೇ ಜವಾಬ್ದಾರರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸುತ್ತಿರುವುದು ಸರಿಯಲ್ಲ. ಯಾರಿಗೆ ಧರ್ಮ, ದೇಶದ ಪರಿಕಲ್ಪನೆ ಇರುವುದಿಲ್ಲವೋ ಅಂತಹವರು ಈ ರೀತಿ ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಸಾವರ್ಕರ್ ಕುರಿತು ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಸಿದ್ಧರಾಮಯ್ಯ ಇದೇ ರೀತಿ ಮುಂದುವರಿದರೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಆ ಕಾಲ ಬಹಳ ದೂರವಿಲ್ಲ ಎಂದರು.
ಸಾವರ್ಕರ್ ಅವರ ದೇಶಭಕ್ತಿಯನ್ನು ಜನರಿಗೆ ಸಾರುವ ಸಲುವಾಗಿ ರಥಯಾತ್ರೆ ನಡೆಸುತ್ತಿದ್ದೇವೆ. ಹೆಚ್ಚಿನ ಜನರನ್ನು ಸೇರಿಸದೇ ಸಾವರ್ಕರ್ ರಥಯಾತ್ರೆ ನಡೆಸುತ್ತೇವೆ. ಶಾಂತಿಯುತವಾಗಿ ರಥಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು.
ಸಾವರ್ಕರ್ ರಥಯಾತ್ರೆ ಮೂಲಕ ದೇಶದಲ್ಲಿ ಜಾಗೃತಿ ಮೂಡಿಸುವ ಮೂಲಕ ಸಾವರ್ಕರ್ ವಿಚಾರ ಧಾರೆಗಳನ್ನು ಜನರಿಗೆ ತಿಳಿಸುವ ಮೂಲಕ, ಜನರಲ್ಲಿ ಜಾಗೃತಿ ಮೂಡಿಸಿ, ದೇಶಭಕ್ತಿ ಮೂಡಿಸುವ ವಿಶೇಷ ಕಾರ್ಯಕ್ರಮ ಸಾವಕರ್ರ ರಥಯಾತ್ರೆ. ಅದರಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದೇನೆ ಎಂದರು.
ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿರುವ ದಸರಾ ಆನೆಗಳನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಬ್ಬು, ಬೆಲ್ಲ ತಿನ್ನಿಸಿದರು. ಮಾವುತರು, ಕಾವಾಡಿಗರಲ್ಲಿ ಯೋಗಕ್ಷೇಮ ವಿಚಾರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಮತ್ತಿತರರು ಜೊತೆಗಿದ್ದರು.