ನಂದೀಶ್ ಸಾವು, ಗುತ್ತಿಗೆದಾರರೊಬ್ಬರ ದಯಾಮರಣ ಪತ್ರ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಗೆ ಸಾಕ್ಷಿ

Social Share

ಮೈಸೂರು, ಅ.31- ಕೆ.ಆರ್.ಪುರಂ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಯವರಿಗೆ ಪತ್ರ ಬರೆದು ದಯಾಮರಣ ಕೋರಿರುವುದು ರಾಜ್ಯ ಸರ್ಕಾರದ ಶೇ.40ರಷ್ಟು ಕಮಿಷನ್ ದಂಧೆಗೆ ಪ್ರಬಲ ಸಾಕ್ಷವಾಗಿದೆ ಎಂದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯಾಘಾತದಿಂದ ನಿಧನರಾದ ಕೆ.ಆರ್.ಪುರಂ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ನಂದೀಶ್ ಅವರ ಅಂತಿಮ ದರ್ಶನ ಪಡೆಯಲು ಹೋಗಿದ್ದ ಎಂಟಿಬಿ ನಾಗರಾಜ್ ಅವರು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುವಾಗ 70-80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದೆ ಇರುತ್ತದಾ? ಎಂದು ಹೇಳಿದ್ದಾರೆ.

ಇದನ್ನು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದಲ್ಲ, ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವವರು ಹೇಳಿದ್ದು. ನಂದೀಶ್ ಅವರು ಸಾಲ ಮಾಡಿ 70-80 ಲಕ್ಷ ಲಂಚ ನೀಡಿದ್ದಾರೆ ಆಮೇಲೆ ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.

ಈ ಒತ್ತಡದಿಂದ ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಹೊಣೆ ಅಲ್ಲವೇ ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಪಡೆದಿರಬೇಕು ? ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಬಸವರಾಜ ಅಮರಗೋಳ ಎಂಬ ವ್ಯಕ್ತಿ ಕೊರೊನಾ ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ, ಮೂಡಿಗೆರೆ ಹಾಗೂ ಕಡೂರು ಮುಂತಾದ ಕಡೆಗಳಿಗೆ ಉಪಕರಣಗಳನ್ನು ಸರಬರಾಜು ಮಾಡಿದ್ದರು. ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇಲೆ ಸರಬರಾಜು ಮಾಡಿದ್ದಾರೆ. ಈಗಾಗಲೇ ಎರಡು ವರ್ಷವಾಗಿದೆ.

ಗುತ್ತಿಗೆ ಒಪ್ಪಂದದಲ್ಲಿ ಶೇ.20 ಬಿಲ್ ಮಾತ್ರ ಪಾವತಿಯಾಗಿದೆ. ಬಾಕಿ ಹಣಕ್ಕಾಗಿ ಆತ ಮುಖ್ಯಮಂತ್ರಿಗಳನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ, ಅೀನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಇದರಿಂದ ಯಾವ ಉಪಯೋಗ ಆಗದಿದ್ದಕ್ಕೆ ಸಾಕಾಗಿ ಕೊನೆಗೆ ರಾಷ್ಟ್ರಪತಿಗಳಿಗೆ ಇದೇ ತಿಂಗಳ 20ರಂದು ಪತ್ರ ಬರೆದು, ಬಿಲ್ ಪಾವತಿಗೆ ತಮ್ಮ ಬಳಿ ಶೇ.35-40 ಕಮಿಷನ್ ಕೇಳುತ್ತಿದ್ದಾರೆ.

ಅಷ್ಟು ಹಣ ನನ್ನಿಂದ ಕೊಡಲಾಗುತ್ತಿಲ್ಲ. ಬಾಕಿ ಬಿಲ್ ಹಣ ಕೊಡಿಸಿ ಇಲ್ಲವಾದರೆ ನನಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದು ಸರ್ಕಾರ ಶೇ.40 ಕಮಿಷನ್ ಪಡೆಯುತ್ತಿದೆ ಎಂಬುದಕ್ಕೆ ಪ್ರಬಲ ಸಾಕ್ಷಿ ಎಂದರು.

ಬಿಜೆಪಿಗೆ ನನ್ನ ಕಂಡರೆ ಭಯ, ಹಾಗಾಗಿ ಅವರು ಎಲ್ಲಾ ಕಡೆ ನನ್ನನ್ನು ಟಾರ್ಗೇಟ್ ಮಾಡಿ ನನ್ನ ಇಮೇಜ್ ಅನ್ನು ಕಡಿಮೆ ಮಾಡಲು ನೋಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಬೆದರುವವನಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರ ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದಿದ್ದು ಏಕೆ? ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಕೂರುವಂತೆ ಮಾಡಿದ್ದು ಯಾಕೆ ? ನಮ್ಮ ಪಕ್ಷದ ಎಸ್.ಸಿ ಹಾಗೂ ಎಸ್.ಟಿ ಶಾಸಕರು ಪ್ರತೀ ಬಾರಿ ಸದನ ಕರೆದಾಗ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಧರಣಿ ಕೂತಿದ್ದಾರೆ.

ಕರ್ನಾಟಕ ರತ್ನ ಮೂಲಕವೂ ಹಲವು ದಾಖಲೆ ಬರೆಯಲಿದ್ದಾರೆ ಅಪ್ಪು

ಇದಕ್ಕೆ ಬಿಜೆಪಿಯ ಒಬ್ಬ ಶಾಸಕ ಬೆಂಬಲ ನೀಡಿದ್ರಾ? ಸಚಿವ ಶ್ರೀರಾಮುಲು ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರ ಅಕಾರಕ್ಕೆ ಬಂದರೆ 24 ಗಂಟೆಯೊಳಗೆ ನಾಗಮೋಹನ್ ದಾಸ್ ವರದಿ ಜಾರಿ ಮಾಡುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು.

ಈಗ 24 ನಂತರ ಜಾರಿ ಮಾಡಿರುವುದಾ? ಇದರರ್ಥ ನಮ್ಮಿಂದ ಒತ್ತಡ ಜಾಸ್ತಿಯಾದ ಮೇಲೆ ಮತ್ತು ವಾಲ್ಮೀಕಿ ಶ್ರೀಗಳು ಧರಣಿ ಕೂತಮೇಲೆ ಬೇರೆ ದಾರಿಯಿಲ್ಲದೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ನಾನು ಹೇಳಿದ್ದು ಒಂದು ಕಾಯ್ದೆ ಮಾಡಬೇಕು ಎಂದು.

ಎರಡು ದಿನಗಳ ವಿಶೇಷ ಅವೇಶನ ಕರೆದು, ಒಂದು ಕಾಯ್ದೆ ಮಾಡಿ, ನಂತರ ಹೇಗೂ ಕೇಂದ್ರದಲ್ಲಿಯೂ ಬಿಜೆಪಿಯದೇ ಸರ್ಕಾರ ಇರುವುದರಿಂದ ದೆಹಲಿಗೆ ಹೋಗಿ ಕೆಲವು ದಿನಗಳ ಕಾಲ ಕೂತು ಅದನ್ನು ಸಂವಿಧಾನದ 9 ಶೆಡ್ಯೂಲ್ ಗೆ ಸೇರಿಸಬೇಕಿತ್ತು. 9ನೇ ಶೆಡ್ಯೂಲ್‍ಗೆ ಸೇರಿಸದೇ ಹೋದರೆ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ ಎಂದರು.

1992ರ ಇಂದಿರಾ ಸಹಾನಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಪೀಠವು ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಮೀರಬಾರದು ಎಂದು ತೀರ್ಪು ನೀಡಿದೆ. ಈಗ ಈ ಮಿತಿಯನ್ನು ಸಡಿಲ ಮಾಡಿ ಶೇ.6 ಹೆಚ್ಚಳ ಮಾಡಿದ್ದಾರೆ. ಇದರ ಜೊತೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಶೇ.10 ಮೀಸಲಾತಿ ನೀಡಲಾಗಿದೆ. ಇದರಿಂದ ಒಟ್ಟು ಮೀಸಲಾತಿ ಶೇ.66ರಷ್ಟಾಗಿದೆ. ಕಾನೂನಾತ್ಮಕ ಬಲ ನೀಡುವ ಬದಲು ಕ್ರಾಂತಿಕಾರಕ ನಿರ್ಧಾರ ಎಂದು ಬುರುಡೆ ಬಿಟ್ಟರೆ ಆಗುವುದಿಲ್ಲ ಎಂದರು.

ಪತ್ರಕರ್ತರಿಗೆ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲಕ್ಷ ಲಕ್ಷ ಹಣದ ಉಡುಗೊರೆ ನೀಡಿದ್ದಾರೆ. ತಮ್ಮ ಕಚೇರಿಯ ಯಾರೋ ಒಬ್ಬರು ಇದನ್ನು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬೊಮ್ಮಾಯಿ ಅವರ ಗಮನಕ್ಕೆ ಬರದೆ ಈ ರೀತಿ ಯಾರೋ ಒಬ್ಬರು ಹಣ ಕೊಡೋಕೆ ಆಗುತ್ತಾ? ಇದನ್ನು ಪತ್ರಕರ್ತರು ವಾಪಾಸು ಕೊಟ್ಟಿದ್ದಾರೆ.

ಈ ರೀತಿ ಹಣ ಕೊಡುವ ಹಿಂದಿನ ಉದ್ದೇಶ ಏನು? ಸರ್ಕಾರದ ಮೇಲೆ ಯಾವುದೇ ಆರೋಪ ಮಾಡಬಾರದು, ಸರ್ಕಾರದ ವಿರುದ್ಧ ಏನು ಬರೆಯಬಾರದು, ಅವರ ಬಾಯಿ ಮುಚ್ಚಿಸಬೇಕು ಎಂದು ಕೊಟ್ಟಿರುವುದು. ಈ ಹಣ ಯಾವುದು? ಎಲ್ಲಿಂದ ಬಂತು ಗೊತ್ತಾ? ಇದು ಶೇ.40 ಕಮಿಷನ್ ಲಂಚ ಹೊಡೆದ ದುಡ್ಡು. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದರು.

ಕೆಲವರೆಲ್ಲ ಉಡುಗೊರೆ ಹಣವನ್ನು ವಾಪಾಸು ಕೊಟ್ಟಿದ್ದಾರೆ, ಆದರೆ ಅವು ಬಾಯಿ ಬಿಟ್ಟು ಹೇಳುವ ಹಾಗೆ ಇಲ್ಲ. ಈ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಇದೆ. ಈ ಬಿಜೆಪಿಯವರು ಎಂಥಾ ಲಜ್ಜೆಗೆಟ್ಟವರು ಇರಬಹುದು? ಒಂದು ಲಕ್ಷ ಹಣ ಕೊಟ್ಟು ಅದಕ್ಕೂ ಸಮರ್ಥನೆ ನೀಡುತ್ತಾರಲ್ಲ ಎಂಥಾ ಭಂಡರು. ಬಿಜೆಪಿ ಮತ್ತು ಆರ್.ಎಸ್.ಎಸ್ ಒಂದು ಸುಳ್ಳಿನ ಕಾರ್ಖಾನೆಗಳಿದ್ದಂತೆ, ಸುಳ್ಳು ಸೃಷ್ಟಿಯೇ ಅವರ ಕೆಲಸ ಎಂದು ಲೇವಡಿ ಮಾಡಿದರು.

ನಳಿನ್ ಕುಮಾರ್ ಕಟೀಲ್ ಯಾವ ಹಿನ್ನೆಲೆಯಿಂದ ಬಂದವರು? ಯಾವ ಹೋರಾಟ ಮಾಡಿಕೊಂಡು ಬಂದಿದ್ದಾರೆ? ಆರ್.ಎಸ್.ಎಸ್ ಹಿನ್ನೆಲೆ ಮಾತ್ರ ಇರುವುದು. ಅವರೊಬ್ಬ ಜೋಕರ್, ಅಂಥವರಿಗೆಲ್ಲ ನಾನು ಉತ್ತರ ಕೊಡುತ್ತಾ ಕೂರಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Articles You Might Like

Share This Article