ಬೆಂಗಳೂರು, ಫೆ.18- ಹಿಜಾಬ್ ವಿಷಯದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದೆ ಸಂಘ ಪರಿವಾರ. ಅಲ್ಪಸಂಖ್ಯಾತರ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಸರ್ಕಾರಕ್ಕೆ ಎಲ್ಲವೂ ಗೋತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಶಾಸಕರ ನಿಯೋಗದೊಂದಿಗೆ ನಾವಿಬ್ಬರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸರ್ಕಾರ ಅನುಸರಿಸುತ್ತಿರುವ ಗೊಂದಲಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಕಾನೂನು ಸಚಿವರಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸುವಂತೆ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮಾತನಾಡಿ, ಅನಗತ್ಯವಾಗಿ ಸಂಘ ಪರಿವಾರಿದವರು ಹಿಜಾಬ್ ಬಗ್ಗೆ ವಿವಾದ ಹುಟ್ಟಿಹಾಕಿದ್ದಾರೆ. ಹಿಜಾಬ್ ಧರಿಸುವಂಥದ್ದು ಅನೇಕ ವರ್ಷಗಳಿಂದ ಇದೆ. ಕೆಲವು ವಿದ್ಯಾರ್ಥಿಗಳು ಧರಿಸದೇ ಇರಬಹುದು. ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಕೋರ್ಟ್ ನಲ್ಲಿ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಅವರ ಸಂಪ್ರದಾಯಕ್ಕೆ ತಕ್ಕಂತೆ ಅವರು ಆಚರಣೆ ಮಾಡುತ್ತಾರೆ.
ಧರ್ಮದ ಸಂಪ್ರದಾಯಗಳ ಆಚರಣೆ ಮಾಡುವುದಕ್ಕೆ ಸಂವಿಧಾನ ಹಕ್ಕು ಕೊಟ್ಟಿದೆ. ಇದಕ್ಕೆ ಯಾರೂ ಕೂಡ ಅಡ್ಡಿಪಡಿಸಬಾರದು ಎಂದರು. ಅಲ್ಪಸಂಖ್ಯಾತರು ಇತ್ತೀಚೆಗೆ ಶಿಕ್ಷಣದ ಕಡೆ ಗಮನಹರಿಸಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ಕಡಿಮೆ ಇದೆ. ಹಿಜಾಬ್ ಪ್ರಕರಣ ಹಿಡಿದು ಸಂಘ ಪರಿವಾರದವರು ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗದೇ ರೀತಿ ಹುನ್ನಾರ ನಡೆಸಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಶಿಕ್ಷಣ ಹಕ್ಕು ಜಾರಿಗೆ ತಂದಿದ್ದರು. ಶಿಕ್ಷಣದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು. ಎಲ್ಲರಿಗೂ ಸಮಾನವಾದ ಶಿಕ್ಷಣ ಸಿಗಬೇಕು ಎಂಬುದು ಕಾಯ್ದೆಯ ಉದ್ದೇಶ ಎಂದರು.
ಅಭಿವೃದ್ಧಿ ಸಮಿತಿಗಳು ಇರುವ ಕಡೆ ವಸ್ತ್ರ ಸಂಹಿತೆ ಮಾಡಿದ್ದರೆ ಅದನ್ನು ಪಾಲನೆ ಮಾಡಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಉಳಿದಂತೆ ವಸ್ತ್ರಸಂಹಿತೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಪದವಿ ಕಾಲೇಜುಗಳಿಗೆ ವಸ್ತ್ರ ಸಂಹಿತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೂ, ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಸುತ್ತೋಲೆ ಹೊರಡಿಸಿದ್ದಾರೆ. ಅದು ಅಲ್ಪಸಂಖ್ಯಾತ ಇಲಾಖೆ ಅಧೀನದ ಶಾಲೆಗಳಲ್ಲಿ ವಸ್ತ್ರ ಸಂಹಿತೆಗೆ ಬಲವಂತ ಮಾಡಿದಂತಿದೆ. ಅಧಿವೇಶನದಲ್ಲಿ ಮುಖ್ಯಮಂತ್ರಿ ಹಿಜಾಬ್ ವಿಷಯದಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಆಗಿದ್ದ ಮೇಲೆ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಅವರ ಆದೇಶ ಏಕೆ ಬೇಕಿತ್ತು. ಸರ್ಕಾರ ಎಲ್ಲವನ್ನು ಗೊಂದಲ ಮಾಡುತ್ತಿದೆ ಎಂದು ಕಿಡಿಕಾರಿದರು.
ಪ್ರಧಾನ ಮಂತ್ರಿ ಬೇಟಿ ಬಚಾವ್ ಬೇಟಿ ಪಡಾವ್ ಅಂತಾರೆ, ಆದರೆ ಇಲ್ಲಿ ಮಾಡ್ತಿರುವುದು ಏನು ? ಸಂಘಪರಿವಾರ ಇರಲಿ, ಭಜರಂಗದಳ, ಆರ್ ಎಸ್ ಎಸ್,ಎಸ್ ಡಿ ಪಿ ಐ ಯಾರೇ ಇರಲಿ. ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಪಡಿಸಬಾರದು. ಈಗ ನಡೆಯುತ್ತಿರುವುದು ಸಂವಿಧಾನ ಬಾಹಿರ ಕೆಲಸ. ಸರ್ಕಾರ ಕೂಡಲೇ ತನ್ನ ಆದೇಶ ಹಿಂಪಡೆಯಬೇಕು. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಕೆಲವೆಡೆ ಅಮಾನವೀಯವಾಗಿ ಮಕ್ಕಳನ್ನ ಶಾಲೆಯಿಂದ ಹೊರ ಕಳುಹಿಸಲಾಗಿದೆ. ಶಾಲೆಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿವಾದ ನ್ಯಾಯಾಲಯದ ಮೆಟ್ಟಿಲು ಏರಲು ಬಿಡಬಾರದಿತ್ತು. ಆರಂಭದಲ್ಲೇ ಸಂಧಾನ ನಡೆಸಿ ಬಗೆ ಹರಿಸಬಹುದಿತ್ತು ಎಂದರು.ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸ ದ ಬಗ್ಗೆ ಈ ದೇಶದ ಸಂವಿಧಾನದಲ್ಲಿ ಹಕ್ಕಿದೆ. ಅವರವರ ಧರ್ಮದ ಆಚರಣೆಗೆ ಎಲ್ಲರಿಗೂ ಅವಕಾಶ ಇದೆ. ಸಮವಸ್ತ್ರ ವಿಚಾರದಲ್ಲಿ ಯಾವುದೇ ನಿರ್ಭಂದ ಮೊದಲು ಇರಲಿಲ್ಲ. ಫೆಬ್ರವರಿ 5ರವರೆಗೆ ಯಾವುದೇ ಮಾರ್ಗಸೂಚಿಗಳು ಇರಲಿಲ್ಲ. ಸರ್ಕಾರ ಹೊಸದಾಗಿ ಏಕೆ ಮಾರ್ಗಸೂಚಿ ಮಾಡಿದರು ಎಂದು ಪ್ರಶ್ನಿಸಿದರು.
ಹಿಜಾಬ್ ವಿಚಾರ ಈಗ ಸ್ಥಳಿಯವಾಗಿ ಉಳಿದಿಲ್ಲ. ಮೂಲಭೂತ ಹಕ್ಕಿಗೆ ಈಗ ತೊಂದರೆ ಬಂದಿದೆ. ಕೋರ್ಟ್ ಅದೇಶ ಇದ್ದರೂ ಅಲ್ಪಸಂಖ್ಯಾತರ ಇಲಾಖೆಯಿಂದ ಆದೇಶ ಹೊರಡಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಅಭಿವೃದ್ಧಿ ಸಮಿತಿಗಳಿಲ್ಲ ಎಂದರು.ಕ್ರಿಶ್ಚಿಯನ್ ಸಂಸ್ಥೆಗಳಲ್ಲೂ ಹಿಜಾಬ್ ಹಾಕಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ವಿವಾದ ಮುಂದುವರೆದರೆ ರಾಜ್ಯಕ್ಕೆ ಬಂಡವಾಳ ಹೂಡಲು ಯಾರು ಬರುವುದಿಲ್ಲ. ಸಿಎಂ ಇದನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ, ಮೂಲಭೂತ ಸೌಕರ್ಯ, ಶಾಂತಿ ಉಪಕ್ರಮಗಳಿಂದ ರಾಜ್ಯ ದೇಶದ ಗಮನ ಸೆಳೆದಿದೆ. ನಿಮ್ಮ ಪ್ರತಿಷ್ಠೆಯನ್ಜು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಹಿಜಾಬು ಗಲಾಟೆಯಿಂದ ಸಮಾಜಕ್ಕೆ ಒಂದು ಕಪ್ಪು ಚುಕ್ಕಿ ಇಡಲಾಗುತ್ತಿದೆ. ಮೊದಲು ಸಮಾಜದಲ್ಲಿ ಶಾಂತಿ ವ್ಯವಸ್ಥೆ ರೂಪಿಸೋಣ ಎಂದು ಸಲಹೆ ನೀಡಿದರು. ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ನಸೀರ್ ಅಹ್ಮದ್ ಮತ್ತಿತರರು ಹಾಜರಿದ್ದರು.
