ಬೆಂಗಳೂರು,ಜು.10- ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.
ಬಳಿಕ ಶ್ರೀಮಲೇ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಆಹ್ವಾನದ ಮೇರೆಗೆ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯನವರು ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ರಾಷ್ಟ್ರಾದ್ಯಂತ ಬಕ್ರೀದ್ ಆಚರಣೆ ನಡೆಯುತ್ತಿದೆ. ಶಾಂತಿ, ಸಮೃದ್ಧಿ, ಸಹನೆ, ಭಾವೈಕ್ಯತೆಗಾಗಿ ಮುಸ್ಲಿಮರು ಅಲ್ಲಾನಲ್ಲಿ ಪ್ರಾರ್ಥಿಸಿದ್ದಾರೆ ಎಂದರು. ಅಂತಃಕರಣ ಶುದ್ದಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಮಾಡುತ್ತಾರೆ. ಪ್ರೀತಿ, ವಿಶ್ವಾಸದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕಿದೆ.
ಮುಸ್ಲಿಂ ಬಾಂಧವರ ಜೊತೆ ನಾನು ಕೂಡ ಪ್ರಾರ್ಥನೆಯಲ್ಲಿ ಭಾಗವಹಿಸಿ ಸಾಮರಸ್ಯಕ್ಕಾಗಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಕುವೆಂಪು ಅವರು ಹೇಳಿದಂತೆ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ, ಹಿಂದೂ, ಮುಸ್ಲಿಂ, ಕ್ರೈಸ್ತರು ಸರ್ವಧರ್ಮ ಸಹಿಷ್ಣುತೆಯಿಂದ ಬದುಕುತ್ತಿದ್ದಾರೆ ಎಂದರು.