PFIನಂತೆ RSS ಮೇಲೂ ಕ್ರಮ ಕೈಗೊಳ್ಳಬೇಕು : ಸಿದ್ದರಾಮಯ್ಯ

Social Share

ಬೆಂಗಳೂರು,ಸೆ.28- ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಸ್ವಾಗತಿಸುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‍ಐ ಸೇರಿ ಅಂಗ ಸಂಸ್ಥೆಗಳು ಸಮಾಜದಲ್ಲಿ ಆಶಾಂತಿ ಉಂಟು ಮಾಡುತ್ತವೆ. ಅವುಗಳ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಅದೇ ರೀತಿ ಆರ್‍ಎಸ್‍ಎಸ್ ನವರು ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಾರೆ. ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು.

ಸಮಾಜದಲ್ಲಿ ಶಾಂತಿ ಭಂಗ ಮಾಡುವ, ದ್ವೇಷ ಸೃಷ್ಟಿಸುವ, ಸಾಮರಸ್ಯ ಹಾಳು ಮಾಡುವ ಯಾವುದೇ ಸಂಘಟನೆಗಳಾದರೂ ಅವುಗಳನ್ನು ನಿಷೇಧಿಸಬೇಕು ಎಂದು ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಲೇ ಇದ್ದೇವೆ ಎಂದ ಅವರು, ಬಿಜೆಪಿ ಟ್ವೀಟ್‍ಗೆ ಪ್ರತಿಕ್ರಿಯಿಸಿ ಇಷ್ಟು ದಿನ ಯಾಕೆ ನಿಷೇಧ ಮಾಡಿರಲಿಲ್ಲ. ನಾವೆಲ್ಲಾ ಒತ್ತಾಯ ಮಾಡಿದ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದರು.

ಹನ್ನೆರಡು ದಿನಗಳ ಹಿಂದೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಮುಂದೆ ಸರಣಿ ಪ್ರಶ್ನೆಗಳನ್ನು ಮುಂದಿಟ್ಟು ಕೇಂದ್ರ ಮತ್ತು ರಾಜ್ಯ ಎರಡು ಕಡೆ ನಿಮ್ಮದೆ ಸರ್ಕಾರವಿದೆ. ಪಿಎಫ್‍ಐ, ಎಸ್‍ಡಿಪಿಐ ಸೇರಿ ಯಾವ ಸಂಘಟನೆಗಳೇ ಆಗಲಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿವೆ. ಗಲಭೆಗಳಿಗೆ ಕಾರಣವಾಗುತ್ತಿವೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಕೇಂದ್ರ ಸರ್ಕಾರ ಅಂತಹ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಒತ್ತಾಯಿಸಿದ್ದರು.

ಇಂದು ಬೆಳಗ್ಗೆ ಕೇಂದ್ರದ ನಿರ್ಧಾರ ಹೊರ ಬೀಳುತ್ತಿದ್ದಂತೆ ಟ್ವೀಟ್ ಮಾಡಿದ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರೇ ನಾನು ನುಡಿದಂತೆ ನಡೆದಿದ್ದೇವೆ. ನೀವು ಉಗ್ರಭಾಗ್ಯ ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ ಎಂದು ತಿರುಗೇಟು ನೀಡಿದೆ.

ಪಿಎಫ್‍ಐ ನಿಷೇಧದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೆ ಬಂದಿದೆ. ಪಿಎಫ್‍ಐ ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ ಶಾಂತಿ ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಸುವುದನ್ನು ಕಾಂಗ್ರೆಸ್ ಸ್ವಾಗತಿಸಲಿದೆ ಎಂದು ಹೇಳಿದೆ.

Articles You Might Like

Share This Article