ಮೈಸೂರು,ಫೆ.1- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ರಾಂತಿ ಪಡೆಯುವ ಸಲುವಾಗಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದಾರೆ. ನಿನ್ನೆಯಿಂದ ರೆಸಾರ್ಟ್‍ನಲ್ಲಿರುವ ಅವರು ಇಂದೂ ಕೂಡ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ನಿನ್ನೆ ಮೈಸೂರಿನ ನಿವಾಸಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಹೆಚ್.ಡಿ. ಕೋಟೆಗೆ ಪ್ರಯಾಣ ಬೆಳೆಸಿದ್ದರು. ನಂತರ ಅಲ್ಲಿನ ರೆಸಾರ್ಟ್‍ನಲ್ಲಿ ತಂಗಿದ್ದರು.
ಇತ್ತ ತಮ್ಮ ವಿರುದ್ಧ ಸಿಡಿದೆದ್ದಿರುವ ಆಪ್ತ ಸಿಎಂ ಇಬ್ರಾಹಿಂ ಮೇಲ್ಮನೆ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಆಂತರ್ಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಈ ನಡೆ ಕುತೂಹಲ ಕೆರಳಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಸಿಎಂ ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾರೆ. ಅವರೆಲ್ಲೂ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ. ನಾನು ಇನ್ನೂ ಸಿ.ಎಂ.ಇಬ್ರಾಹಿಂ ಜೊತೆ ಮಾತುಕತೆ ನಡೆಸಿಲ್ಲ. ಇಬಾಹ್ರಿಂ ಎಲ್ಲೂ ಹೋಗುವುದಿಲ್ಲ ಕಾಂಗ್ರೆಸ್ ನಲ್ಲಿರುತ್ತಾರೆ. ಹಲವಾರು ಬಾರಿ ಪಕ್ಷ ಬಿಡುವ ಮಾತುಗಳನ್ನು ಹೇಳಿದ್ದಾರೆ.
ರಾಜ್ಯಸಭಾ ಸದಸ್ಯನಾಗಿ ಮಾಡದ ಹಿನ್ನೆಲೆ ಜೆಡಿಎಸ್ ಬಿಟ್ಟಿದ್ದರು. ಆದರೆ ಈಗ ಸಿ.ಎಂ.ಇಬ್ರಾಹಿಂಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಇಂತಹ ಭಿನ್ನಾಭಿಪ್ರಾಯ ಬಂದಾಗ ಕುಳಿತು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯನವರು ನನ್ನನ್ನು ಯಾರೂ ತಬ್ಬಲಿ ಮಾಡುವುದಕ್ಕೆ ಆಗುವುದಿಲ್ಲ. ರಾಜ್ಯದ ಜನರು ನನ್ನ ಜೊತೆ ಇರುವವರೆಗೆ ತಬ್ಬಲಿ ಆಗಲ್ಲ ಎಂದು ಪ್ರತಿಕ್ರಿಯೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
