RSS ವಿರುದ್ಧ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

Spread the love

ಬೆಂಗಳೂರು, ಮೇ 27- ಮಾಜಿ ಪ್ರಧಾನಿ ನೆಹರು ಅವರ 58ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ಆರ್‌ಎಸ್‌ಎಸ್‌ ನವರು ಮೂತಲಃ ಭಾರತೀಯರೇ ಎಂದು ಪ್ರಶ್ನಿಸುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದು, ನಾನು ಇಷ್ಟು ದಿನ ಈ ವಿಷಯ ಚರ್ಚಿಸಬಾರದು ಎಂದಿದ್ದೆ. ಆರ್ಯರು ಭಾರತೀಯರಲ್ಲ. ಮಧ್ಯಪ್ರಾಚ್ಯದಿಂದ ಬಂದವರು. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು. ವಲಸೆ ಬಂದ ಆರ್ಯರು ಆರ್‌ಎಸ್‌ಎಸ್‌ ಮೂಲಕ ಈ ದೇಶದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಶಾರೂಖ್‍ಖಾನ್ ದೇಶ ತೊರೆಯಬೇಕೆಂದು ಪ್ರಶ್ನೆಗಳು ಎದುರಾದಾಗ ಕೇಂದ್ರ ಸಚಿವ ರಾಜನಾಥ್‍ಸಿಂಗ್‍ಗೆ ನಾನು ಮರುಪ್ರಶ್ನೆ ಹಾಕಿ, ಶಾರೂಖ್‍ಖಾನ್ ಎಲ್ಲಿಗೆ ಹೋಗಬೇಕು? ನೀವು ಮಧ್ಯಪ್ರಾಚ್ಯದಿಂದ ಬಂದವರು. ನೀವು ಅಲ್ಲಿಗೆ ಹೋಗಿ ಎಂದು ತಿರುಗೇಟು ನೀಡಿದ್ದೆ ಎಂದರು. ಇದಕ್ಕೆ ನೀವು ಹೇಳಿರುವುದು ಸರಿಯಾಗಿದೆ ಎಂದು ಸಿದ್ದರಾಮಯ್ಯ ಅನುಮೋದಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರು ಮತ್ತು ಹಾಲಿ ಪ್ರಧಾನಿ ಮೋದಿಗೆ ಹೋಲಿಕೆ ಸರಿಯಲ್ಲ. ಇಬ್ಬರ ನಡುವೆ ಆಕಾಶ, ಭೂಮಿಯಷ್ಟು ಅಂತರವಿದೆ. ನೆಹರು ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಮೋದಿ ಆ ಜಾಗದಲ್ಲಿ ನೀತಿ ಆಯೋಗ ಹೆಸರಿನಲ್ಲಿ ಇತಿಹಾಸ ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನೀತಿ ಆಯೋಗ, ಆರ್‍ಬಿಐ, ಸಿಎಜಿ ಸೇರಿದಂತೆ ಎಲ್ಲಾ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಕಳೆದ ಮೂರು ವರ್ಷಗಳಿಂದ ನೀತಿ ಆಯೋಗ ಯಾವ ಸರ್ವೆಯನ್ನೂ ಮಾಡಿಲ್ಲ. ಅಂಕಿ-ಅಂಶಗಳೇ ಲಭ್ಯವಿಲ್ಲ. ಸಿಎಜಿ ಕೂಟ ತಟಸ್ಥವಾಗಿದೆ. ಆರ್ಥಿಕ ಸೂಚ್ಯಂಕದ ಮಾಹಿತಿಯೇ ಸಿಗುತ್ತಿಲ್ಲ. ಎಲ್ಲವನ್ನೂ ಮುಚ್ಚಿಹಾಕಲಾಗುತ್ತಿದೆ. ಸ್ವಾಯತ್ತ ಸಂಸ್ಥೆಗಳ ಕತ್ತು ಹಿಸುಕಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿಯಾಗಿ ಮೋದಿ 8 ವರ್ಷ ಪೂರೈಸಿದ್ದಾರೆ. ಅವರ ಸಾಧನೆ ಏನು ಎಂಬುದು ಗೊತ್ತಿಲ್ಲ. ಪ್ರಜಾಪ್ರಭುತ್ವದ ಬೇರನ್ನೇ ಕೀಳುತ್ತಿದ್ದಾರೆ. ಮೋದಿಗಿಂತಲೂ ನೆಹರು ಅವರಿಗೆ ಹೆಚ್ಚಿನ ಸಂಖ್ಯಾಬಲ ಇತ್ತು. ಆದರೆ, ಅವರು ಪ್ರಜಾಸತ್ತಾತ್ಮಕ ಆಡಳಿತ ನಡೆಸಿದರು. ಐಐಟಿ, ಏಮ್ಸ್ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿದರು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದರು ಎಂದು ಹೇಳಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ರಾಜ್ಯಸಭೆ ಸದಸ್ಯ ಜಯರಾಮ್ ರಮೇಶ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಯು.ಟಿ.ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Facebook Comments