ಬೆಂಗಳೂರು,ಮಾ.18- ವಿಧಾನಸಭೆ ಚುನಾವಣೆ ಯಲ್ಲಿ ಸ್ರ್ಪಧಿಸುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿದ್ದಂತೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ.
ಈ ಮೊದಲು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುದ್ದು ಹೈಕಮಾಂಡ್ ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರು. ಚಾಮುಂಡೇಶ್ವರಿ ಯಲ್ಲಿ ಸೋಲು ಕಂಡು ಬಾದಾಮಿಯಲ್ಲಿ ಗೆದ್ದಿದ್ದರು. ಈ ಬಾರಿ ಬಾದಾಮಿಯಲ್ಲೂ ಸ್ಥಳೀಯವಾಗಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಅನೇಕ ನಾಯಕರು ಸಿದ್ದರಾಮಯ್ಯ
ಬೇರೆ ಕಡೆ ಸ್ಪರ್ಧೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಅದರ ಬೆನ್ನಲ್ಲೆ ಸಿದ್ದರಾಮಯ್ಯ ಅಭಿಮಾನಿ ಬಳಗ ಮತ್ತೆ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದೆ. ದೂರದೂರಿನಿಂದ ಆಗಮಿಸಿ ಸಾವಿರಾರು ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಧರಣಿ ನಡೆಸಿ ಮತ್ತೆ ಬಾದಾಮಿಯಲ್ಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರು. ಆಗಲೂ ಸಿದ್ದರಾಮಯ್ಯ ಮನಸ್ಸು ಬದಲಿಸದೆ ಕೋಲಾರದಿಂದಲೇ ಕಣಕ್ಕಿಳಿಯುವ ದೃಢ ನಿರ್ಧಾರ ಕೈಗೊಂಡಿದ್ದರು.
ನಾಯಕರ ಪ್ರಯತ್ನದಿಂದಲೂ ಬಗೆಹರಿಯದ ಕಮಲ ಕಲಹ
ಆದರೆ ಕಾಂಗ್ರೆಸ್ ವತಿಯಿಂದ ನಡೆಸಿರುವ ಎರಡು ಬಾರಿಯ ಸಮೀಕ್ಷೆ ಮತ್ತು ಹೈಕಮಾಂಡ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಕೋಲಾರ ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರವಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರ ಆರಿಸಿಕೊಳ್ಳುವಂತೆ ಅಥವಾ ಈ ಬಾರಿ ಚುನಾವಣೆಯಲ್ಲಿ ಸ್ರ್ಪಧಿಸದೆ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಬಹುದು. ಒಂದು ವೇಳೆ ಸ್ಪರ್ಧೆ ಮಾಡಲೇಬೇಕು ಎಂದಾದರೆ ಸುರಕ್ಷಿತ ಕ್ಷೇತ್ರ ಆರಿಸಿಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಸಿದ್ದರಾಮಯ್ಯ ಮತ್ತೆ ವರುಣಾದಿಂದಲೇ ಸ್ರ್ಪಧಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆ ಆದರೆ ಮುಖ್ಯಮಂತ್ರಿ ರೇಸ್‍ನಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪ್ರಬಲ ಪೈಪೋಟಿ ಇದೆ.
ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ..?
ರಾಹುಲ್‍ಗಾಂಧಿ ಸದಾ ಕಾಲ ಸಿದ್ದರಾಮಯ್ಯ ಅವರ ಹಿತೈಷಿಯಾಗಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಯಾದರೆ ಅದು ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಜೊತೆ ಮುಂದಿನ ವರ್ಷವೇ ನಡೆಯುವ ಲೋಕಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂಬ ಆತಂಕ ಹೈಕಮಾಂಡ್‍ಅನ್ನು ಕಾಡುತ್ತಿದೆ. ಹೀಗಾಗಿ ಮುಖ್ಯಮಂತ್ರಿ ರೇಸ್‍ನಲ್ಲಿರುವ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವ ಅಥವಾ ಚುನಾವಣೆಯಿಂದ ಹಿಂದೆ ಸರಿಸಿ ಪರ್ಯಾಯ ವ್ಯವಸ್ಥೆಯ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಹಾಲಿ ಶಾಸಕರಿಗೆ ಟಿಕೆಟ್ ಖಚಿತ:
ನಿನ್ನೆ ನಡೆದ ಸಭೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಮುಂದಿನ ಚುನಾವಣೆಯಲ್ಲಿ ಸೋಲು ಕಾಣಲಿದ್ದಾರೆ ಎಂಬ ವರದಿಯೂ ಚರ್ಚೆಗೆ ಒಳಗಾಗಿದೆ. ಆದರೂ ಅನಿವಾರ್ಯವಾಗಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಅಖೈರುಗೊಳಿಸಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚಿಸಲಾಗಿದೆ. ಬಾಕಿ 19 ಕ್ಷೇತ್ರಗಳನ್ನು ಅನ್ಯ ಪಕ್ಷಗಳಿಂದ ವಲಸೆ ಬರುವವರಿಗಾಗಿ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಖೈರುಗೊಂಡಿರುವ ಪಟ್ಟಿಯನ್ನು ಬಹುತೇಕ ಯುಗಾದಿ ಹಬ್ಬದ ಬಳಿಕ ಪ್ರಕಟಿಸಲು ತಯಾರಿ ನಡೆದಿದೆ. ಮಾರ್ಚ್ 20ರಿಂದ ರಾಹುಲ್‍ಗಾಂ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದು ಅಂದು ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
Siddaramaiah, says, Cong, high, command, candidacy, Kolar,